ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಮಾಸ್ತಿಗುಡಿ: ಗುಂಡೇಟು ತಿಂದು ನಿತ್ರಾಣಗೊಂಡ ಹುಲಿ!

0

`ಮಾಸ್ತಿಗುಡಿ’ ಸಿನಿಮಾ ತೆರೆಗೆ ಬಂದಿದೆ. ಕಾಡು, ಹುಲಿಸಂರಕ್ಷಣೆಯ ವಿಚಾರವನ್ನು ಸಿನಿಮಾ ರೂಪದಲ್ಲಿ ನಿರೂಪಿಸಿದ್ದಾರೆ ಎನ್ನುವ ಕಾರಣಕ್ಕೆ ಇದು ಮತ್ತೊಂದು `ಗಂಧದ ಗುಡಿ’ಯಾಗಬಹುದು ಎನ್ನುವ ನಿರೀಕ್ಷೆಗಳಿದ್ದವು. ಇದಕ್ಕಿಂತಾ ಹೆಚ್ಚಾಗಿ ಉದಯ್ ಮತ್ತು ಅನಿಲ್ ಎಂಬಿಬ್ಬರು ಯುವನಟರು ಈ ಸಿನಿಮಾದ ಚಿತ್ರೀಕರಣದಲ್ಲಿ ಪ್ರಾಣತ್ಯಾಗ ಮಾಡಿದ್ದರಿಂದ ಸಾಮಾನ್ಯ ಪ್ರೇಕ್ಷಕರೂ ಮಾಸ್ತಿಗುಡಿಯ ಬಗ್ಗೆ ವಿಶೇಷ ದೃಷ್ಟಿ ನೆಟ್ಟಿದ್ದರು.

https://youtu.be/_xKJjphmESg

ಕಾಡು ಮತ್ತು ನಾಡು ಉಳಿಯಬೇಕಾದರೆ ಹುಲಿಯ ಇರುವಿಕೆ ಎಷ್ಟು ಅಗತ್ಯ ಎನ್ನುವ ಮುಖ್ಯ ಎಳೆಯನ್ನಿಟ್ಟುಕೊಂಡು ಈ ಸಿನಿಮಾದ ಕಥೆ ಆರಂಭವಾಗುತ್ತದೆ. ಅದೊಂದೇ ಅಂಶ ಮುಖ್ಯವಾಗಿದ್ದಿದ್ದರೆ ಬಹುಶಃ ಸಿನಿಮಾ ಸಾರ್ಥಕಗೊಳ್ಳುತ್ತಿತ್ತು. ಮಧ್ಯೆ ಬರುವ ಪ್ರೀತಿ, ದ್ವೇಷ, ಕೊಲೆ, ಮೂಢ ನಂಬಿಕೆಗಳ ನಡುವೆ ಹುಲಿಯ ವಿಚಾರ ಗಂಭೀರತೆ ಕಳೆದುಕೊಂಡು ದಿಕ್ಕೆಟ್ಟಿದೆ.
ಸಿನಿಮಾದ ಅನೇಕ ದೃಶ್ಯಗಳು ಎಂ.ಪಿ. ಶಂಕರ್ ಕಾಲದಲ್ಲೇ ಬಂದಿದ್ದ ಗಂಧದಗುಡಿ, ಜಯಸಿಂಹ ಸೇರಿದಂತೆ ಕನ್ನಡದ ಬಹುತೇಕ ಕಾಡಿನ ಸಿನಿಮಾಗಳನ್ನು ನೆಪಿಸುತ್ತವೆ. ದುರಂತ ಪ್ರೇಮಕತೆಗಳನ್ನು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ನಾಗಶೇಖರ್ ಕಾಡಿನಲ್ಲೂ ಪ್ರೀತಿಯನ್ನು ಎಳೆದುತಂದು ಇಲ್ಲೂ ಅದೇ ತರದ ಕತೆಯನ್ನು ತುರುಕಿರೋದೇ ದುರಂತವಾಗಿಬಿಟ್ಟಿದೆ.
ದಸರೆಯಲ್ಲಿ ಅಂಬಾರಿ ಹೊರಲು ಹೋದ ಮಾವುತ (ರಂಗಾಯಣ ರಘು) ಕೈಗೆ ಕಳೆದುಹೋದ ಮಗುವೊಂದು ಸಿಗುತ್ತದೆ. ಆ ಮಗುವನ್ನು ಕಾಡಿಗೆ ತಂದು ಸಾಕಿ ದೊಡ್ಡವನನ್ನಾಗಿ ಮಾಡಿರುತ್ತಾನೆ. ಹೀಗೆ ಬೆಳೆದ ಹುಡುಗ ಮಾಸ್ತಿಗೆ ಕಾಡು, ಕಾಡುಪ್ರಾಣಿಗಳೆಂದರೆ ಪ್ರಾಣ. ಪ್ರಾಣಿಗಳನ್ನು ಕೊಂದು ಅವುಗಳ ಕಳೇಬರವನ್ನು ಕಳ್ಳಸಾಗಾಣೆ ಮಾಡುವವರ ಪಾಲಿಗೆ ಮಾಸ್ತಿ ಸಿಂಹಸ್ವಪ್ನ. ಹುಲಿಗಳನ್ನು ಬೇಟೆಯಾಡುವವರು ಯಾರೇ ಆದರೂ ಅವರನ್ನು ಬೆನ್ನತ್ತಿ ಬಲಿ ತೆಗೆದುಕೊಳ್ಳೋದು ಮಾಸ್ತಿಯ ಗುರಿ. ಇಂಥಾ ಮಾಸ್ತಿಯನ್ನು ಮೆಚ್ಚಿ ಮದುವೆಯಾಗಲು ನಿಂತ ಹುಡುಗಿ (ಅಮೂಲ್ಯ) ಯಾಕೆ ಸಾಯುತ್ತಾಳೆ? ಮತ್ತೊಬ್ಬಳು (ಕೃತಿ ಕರಬಂಧ) ಯಾಕೆ ಮಾಸ್ತಿಯ ಜೊತೆಯಾಗುತ್ತಾಳೆ? ದಿವಂಗತ ನಟರಾದ ಅನಿಲ್ ಮತ್ತು ಉದಯ್ ಪಾತ್ರಗಳೇನು ಅನ್ನೋದೆಲ್ಲ ತಿಳಿಯಬೇಕಿದ್ದರೆ ಮಾಸ್ತಿಗುಡಿಯನ್ನೊಮ್ಮೆ ನೋಡಬೇಕು.
ಮೊದಲರ್ಧ ಭಾಗ ಮುಂದೇನಾಗುತ್ತದೆ ಎಂಬಂಥಾ ಕೌತುಕದ ತುದಿಯಲ್ಲಿ ಪ್ರೇಕ್ಷಕರನ್ನು ಕೂರಿಸುವಲ್ಲಿ ತಕ್ಕಮಟ್ಟಿಗೆ ನಾಗಶೇಖರ್ ಯಶ ಕಂಡಿದ್ದಾರೆ. ಆದರೆ ಸೆಕೆಂಡ್ ಹಾಫ್‌ನಲ್ಲಿ ಮಾತ್ರ ಕಥೆ ಗುಂಡೇಟು ತಿಂದು ನಿತ್ರಾಣಗೊಂಡ ಹುಲಿಯಂತೆಯೇ ದಿಕ್ಕಾಪಾಲಾಗಿ ಓಡಿದಂತಿದೆ. ದ್ವಿತೀಯಾರ್ಧದಲ್ಲಿ ಕಥೆಗೆ ಬೇರೆಯದ್ದೇ ಓಘ ಸಿಕ್ಕೀತೆಂಬ ನಿರೀಕ್ಷೆಯನ್ನು ಅನವಶ್ಯಕ ಎಂಬಂಥ ದೃಷ್ಯಾವಳಿಗಳು ಕಂಗಾಲು ಮಾಡುತ್ತವೆ. ಹುಲಿ ಬೇಟೆ ಎಂಬುದಕ್ಕೆ ಹತ್ತಾರು ನಿಗೂಢಗಳು ಮೆತ್ತಿಕೊಂಡಿವೆ. ಇಂಥಾ ಮಾಫಿಯಾದ ಆಳಕ್ಕಿಳಿದು ಅದರತ್ತ ಮಾತ್ರವೇ ಫೋಕಸ್ ಮಾಡಿದ್ದರೆ ಬಹುಶಃ `ಮಾಸ್ತಿಗುಡಿ ಪ್ರೇಕ್ಷಕರ ನಿರೀಕ್ಷೆಗೆ ತುಸುವಾದರೂ ಸಮವಾಗಿ ನಿಲ್ಲಬಹುದಿತ್ತು.
ಕಾಡಾಚೆಗೆ ಚಲಿಸಲೇ ಬಾರದೆಂಬಂತೆ ದಿಗ್ಭಂಧನ ವಿಧಿಸಿಕೊಂಡ ದೃಷ್ಯಗಳನ್ನು ಎಲ್ಲಿಯೂ ಬೋರು ಹೊಡೆಸದಂತೆ ಕಟ್ಟಿ ಕೊಡುವ ಅವಕಾಶವನ್ನು ನಿರ್ದೇಶಕ ನಾಗಶೇಕರ್ ಕೈ ಚೆಲ್ಲಿಕೊಂಡಂತೆ ಕಾಣಿಸುತ್ತದೆ. ವನ್ಯ ಜೀವಿಗಳನ್ನು ರಕ್ಷಿಸೋ ಕಾನ್ಸೆಪ್ಟಿಗೂ ಎರಡೆರಡು ಪ್ರೇಮ ಕಥಾನಕಗಳನ್ನು ತುರುಕಿ ಅದನ್ನೂ ದುರಂತಮಯವಾಗಿಸಿರುವುದು, ಅದರ ಭಯಾನಕ ಹಿಂಸೆಗಳೆಲ್ಲ ಚೆಂದದ ಕ್ಯಾನ್ವಾಸೊಂದನ್ನು ಪರಚಿ ಅಸ್ಥವ್ಯಸ್ಥ ಮಾಡಿದಂತೆ ಪಿಚ್ಚೆನಿಸುತ್ತದೆ. ಮೌಢ್ಯದಾಚೆಗೆ ಕಾಡು ಜನರ ಬದುಕಿಗೆ ಪ್ರಾಮುಖ್ಯತೆ ನೀಡಿದ್ದರೂ ಮಾಸ್ತಿಗುಡಿ ಚೆಂದಗಾಣುತ್ತಿತ್ತು. ಹುಲಿ ಮತ್ತು ಚಿರತೆಯ ಗ್ರಾಫಿಕ್ಸ್ ಸಾಧ್ಯವಾದಷ್ಟೂ ನೈಜವಾಗಿ ಮೂಡಿಬಂದಿರೋದೇ ಸಿನಿಮಾದ ಹೆಚ್ಚುಗಾರಿಕೆ. ರೀ ರೆಕಾರ್ಡಿಂಗ್ ಕೂಡಾ ಸಿನಿಮಾಗೆ ವರವಾಗಿದೆ.
ಇನ್ನು ಎರಡು ಜೀವ ಬಲಿ ಪಡೆದ ಕ್ಲೈಮ್ಯಾಕ್ಸ್ ಬಗ್ಗೆ ಭಾರೀ ಕುತೂಹಲವಿತ್ತು. ಆದರೆ ಆ ದೃಷ್ಯ `ಇಂಥಾ ಸಾಮಾನ್ಯ ಸೀನೊಂದಕ್ಕೆ ಎರಡು ಜೀವ ಹೋಯ್ತಲ್ಲ ಎಂಬ ಕೊಗರಗನ್ನಷ್ಟೇ ಉಳಿಸುವಂತಿದೆ. ಆದರೆ ವನ್ಯ ಜೀವಿಗಳ ಸಂರಕ್ಷಣೆಯ ಮಹತ್ವ ಸಾರುವ ಮಹತ್ವದ ವಿಚಾರವೊಂದನ್ನು ಮುಟ್ಟಿದ್ದಕ್ಕಾಗಿ ನಿರ್ದೇಶಕ ನಾಗಶೇಖರ್ ಅವರನ್ನು ಅಭಿನಂದಿಸಲೇಬೇಕು. ಇಂತಾ ಹಲವು ಕೊರತೆಗಳಾಚೆಗೆ ಮಾಸ್ತಿಗುಡಿಯನ್ನು ಒಂದು ಸಲ ನೋಡಲೇನೂ ಮೋಸವಿಲ್ಲ. ಆದರೆ, ಇದು ಒಂದು ಸಲ ನೋಡುವ ಚಿತ್ರವಾಗಬಾರದಿತ್ತೆಂಬುದಷ್ಟೇ ನಿಜವಾದ ನೋವು!

  • ಅರುಣ್ ಕುಮಾರ್.ಜಿ
    ನಮ್ಮ ರೇಟಿಂಗ್ *** (3/5)

Share.

Leave A Reply