ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಪಟಾಕಿಯಲ್ಲಿ ಕಾಮಿಡಿ ಚಟಾಕಿ!

0

ಗೋಲ್ಡನ್ ಸ್ಟಾರ್ ಗಣೇಶ್ ಪೊಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಪಟಾಕಿ ಸಿನಿಮಾ ತೆರೆಗೆ ಬಂದಿದೆ. ತೆಲುಗಿನ `ಪಟಾಸ್’ ಚಿತ್ರದ ರಿಮೇಕ್ `ಪಟಾಕಿ’. ತಮಿಳಿನಲ್ಲೂ ಸಹ ಈ ಚಿತ್ರ `ಮೊಟ್ಟ ಸಿವ ಕೆಟ್ಟ ಸಿವ’ ಹೆಸರಿನಲ್ಲಿ ತೆರೆಕಂಡಿದೆ. ತೆಲುಗು ಮತ್ತು ತಮಿಳಿನಲ್ಲಿ ಭರ್ಜರಿ ಯಶಸ್ಸು ಕಂಡಿರುವ ಕಾರಣಕ್ಕೇ `ಪಟಾಕಿ’ಯ ಬಗ್ಗೆ ಕುತೂಹಲ ಹೆಚ್ಚಿತ್ತು. ಜೊತೆಗೆ ಈ ಚಿತ್ರ ಟ್ರೇಲರ್ ಕೂಡಾ ಸಾಕಷ್ಟು ಸೌಂಡು ಮಾಡಿತ್ತು.
ದಾಯಾದಿ ಕಲಹ, ಅಪ್ಪ-ಮಗನ ಸಂಬಂಧದ ಜೊತೆಗೆ ಒಬ್ಬ ನಿಷ್ಠಾವಂತ ಪೊಲೀಸ್ ಮತ್ತು ಭ್ರಷ್ಟ ಪೊಲೀಸ್ ಅಧಿಕಾರಿಗಳ ಕತೆ `ಪಟಾಕಿ’ ಚಿತ್ರದ್ದು. ಸಾಮಾನ್ಯಕ್ಕೆ ಇಂಥಾ ಕಥಾ ಹಂದರವಿರುವ ಸಿನಿಮಾಗಳನ್ನು ತುಂಬಾ ಸೀರಿಯಸ್ ಆಗಿ ನಿರೂಪಿಸಲಾಗುತ್ತದೆ. `ಪಟಾಕಿ’ ಚಿತ್ರದಲ್ಲಿ ಪ್ರತಿಯೊಂದೂ ದೃಶ್ಯದಲ್ಲಿ ಹಾಸ್ಯವನ್ನು ಬೆರೆಸಿರೋದು ವಿಶೇಷ. ಈ ಸಿನಿಮಾ ಔಟ್ ಅಂಡ್ ಔಟ್ ಮನರಂಜನಾ ಸಿನಿಮಾ ಆಗಿರೋದರಿಂದ ಇಲ್ಲಿ ಸಾಕಷ್ಟು ಕಮರ್ಷಿಯಲ್ ಅಂಶಗಳನ್ನು ಬೆರೆಸಿದ್ದಾರೆ. ರಂಜಿಸೋದೇ ಪ್ರಧಾನವಾಗಿರೋ ಕಾರಣಕ್ಕೆ ಇಲ್ಲಿ ಲಾಜಿಕ್ಕುಗಳನ್ನು ಹುಡುಕುತ್ತಾ ಕೂರುವಂತಿಲ್ಲ. ಜೊತೆಗೆ ಈ ಸಿನಿಮಾವನ್ನು ಸೀರಿಯಸ್ಸಾಗಿ ವಿಮರ್ಶೆ ಮಾಡೋ ಅವಶ್ಯಕತೆಯೂ ಇಲ್ಲ. ಸಾಮಾನ್ಯ ಪ್ರೇಕ್ಷಕರು ಸಿನಿಮಾ ಆರಂಭವಾದಾಗಿನಿಂದ ಶುರು ಮಾಡಿ ಮುಗಿಯೋತನಕ ನಗುತ್ತಲೇ ಇರುತ್ತಾರೆ. ಅಷ್ಟರ ಮಟ್ಟಿಗೆ ಸಿನಿಮಾ ಗೆದ್ದಂತೆಯೇ.
ಗಣೇಶ್ ಕಾಮಿಡಿ ದೃಶ್ಯಗಳಲ್ಲಿ ಮಾತ್ರವಲ್ಲ ಆಕ್ಷನ್ ಹೀರೋ ಥರಾ ಅಬ್ಬರಿಸಲೂ ಬರುತ್ತೆ ಅನ್ನೋದನ್ನು `ಪಟಾಕಿ’ಯ ಮೂಲಕ ಸಿಡಿದು ತೋರಿಸಿದ್ದಾರೆ. ಸಾಧುಕೋಕಿಲಾ ಮಂಗಳ ಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಹಾಸ್ಯಪಾತ್ರವಷ್ಟೇ ಅಲ್ಲದೆ ಗಂಭೀರ ತಿರುವಿಗೂ ಕಾರಣವಾಗುತ್ತದೆ. ಇನ್ನು ಅಲೋಕ್ ಬಾಬು, ಸಂಪತ್, ಗಣೇಶ್ ರಾವ್ ಕೇಸರ್‌ಕರ್ ಚೆಂದಗೆ ನಟಿಸಿದ್ದಾರೆ. ಸಂಪತ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಪ್ರಬುದ್ಧ ನಟನಾಗಿ ಗುರುತಿಸಿಕೊಂಡಿದ್ದಾರೆ. ಅಲೋಕ್ ಬಾಬು ಮೊದಲ ಸಿನಿಮಾವಾದರೂ ಪಳಗಿದ ನಟನಂತೆ ನಟಿಸಿದ್ದಾರೆ. ಮನಸ್ಸು ಮಾಡಿದರೆ ಎಂಥಾ ಪಾತ್ರಗಳಲ್ಲಿ ಬೇಕಾದರೂ ನಟಿಸಬಹು ಅನ್ನೋದನ್ನು ರುಜುವಾತುಮಾಡಿದ್ದಾರೆ. ಸಾಯಿಕುಮಾರ್ ಎಂದಿನಂತೆ ಸೂಪರ್ಬ್.
ಜನ ಕೂತಾಗಿಂದ ಏಳುವ ತನಕ ನಕ್ಕುನಲಿಯಲು ಏನೇನು ಬೇಕೋ ಅಷ್ಟೂ ಅಂಶಗಳು ಇಲ್ಲಿವೆ. ತುಂಬಾ ಗಂಭೀರವಾದ ಸಿನಿಮಾ ಇಷ್ಟ ಪಡುವ ಪ್ರೇಕ್ಷಕರಿಗೆ `ಪಟಾಕಿ’ ಅಷ್ಟು ರುಚಿಸೋದಿಲ್ಲ. ಆದರೆ ಮನರಂಜನೆ ಸಿಕ್ಕರೆ ಸಾಕು ಅಂತಾ ಥಿಯೇಟರಿಗೆ ಹೋಗುವ ಮಂದಿಯ ಪಾಲಿಗೆ ನಗುವಿನ ಚಟಾಕಿಯಲ್ಲೇ ಮುಳುಗಿಹೋಗುವಂತೆ ಮಾಡುತ್ತದೆ.
ನಿರ್ದೇಶಕ ಮಂಜು ಸ್ವರಾಜ್ ಪಾಲಿಗಿದು ರಿಮೇಕ್ ಸಿನಿಮಾವಾದರೂ ಇಲ್ಲಿನ ನೇಟಿವಿಟಿಗೆ ಹೊಂದಿಸಿ, ಜನಕ್ಕಿಷ್ಟವಾಗುವ ರೀತಿಯಲ್ಲಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

(4/5)

Share.

Leave A Reply