ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಟೈಗರ್ ಘರ್ಜನೆ ಹೇಗಿದೆ ಗೊತ್ತಾ?

0

ಇಷ್ಟು ದಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಪೂರ್ಣ ಪ್ರಮಾಣದ ಮಾಸ್ ಹೀರೋ ಆಗಿ ಲಾಂಚ್ ಆಗುವ ಉದ್ದೇಶದಿಂದ ನಟ ಪ್ರದೀಪ್ ತೀರಾ ಮುತುವರ್ಜಿ ವಹಿಸಿ ರೂಪಿಸಿರುವ ಸಿನಿಮಾ ಟೈಗರ್. ಜೊತೆಗೆ ಮಾವ ಕೆ. ಶಿವರಾಮ್ ಮತ್ತು ಅಳಿಯ ಪ್ರದೀಪ್ ಒಟ್ಟಿಗೇ ತೆರೆ ಹಂಚಿಕೊಂಡಿರೋದು ವಿಶೇಷ. ಇಷ್ಟು ದಿನ ಅದಾಗಲೇ ಸ್ಟಾರ್ ಎನಿಸಿಕೊಂಡ ನಟರನ್ನು ನಿರ್ದೇಶಿಸಿದ್ದ ಮತ್ತು ಬಹುಪಾಲು ರಿಮೇಕ್ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ನಂದಕಿಶೋರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರದೀಪ್ ಈಗಾಗಲೇ ಹೀರೋ ಅನಿಸಿಕೊಂಡಿದ್ದರೂ ಸ್ಟಾರ್ ಅಂತಾ ಗುರುತಿಸಿಕೊಳ್ಳೋ ಮಟ್ಟಕ್ಕೆ ಬೆಳೆದಿಲ್ಲ. ಹೀಗಾಗಿ ಪ್ರದೀಪ್‌ಗೆ ಸ್ಟಾರ್ ಪಟ್ಟ ತಂದುಕೊಟ್ಟು ಸ್ಟಾರ್‌ಗಳಿಗೆ ಮಾತ್ರವಲ್ಲ ಸಿನಿಮಾ ಮಾಡೋದು ಮಾತ್ರವಲ್ಲ, ತಾನೊಬ್ಬ ಸ್ಟಾರ್ ಮೇಕರ್ ಅಂತಾ ಪ್ರೂವ್ ಮಾಡಿಕೊಳ್ಳುವ ಜರೂರತ್ತಿನಲ್ಲಿ ನಂದ ಕಿಶೋರ್ `ಟೈಗರ್’ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ತಾನೊಬ್ಬ ಪೊಲೀಸ್ ಅಧಿಕಾರಿಯಾಗಲೇಬೇಕು ಎಂದು ಪಣ ತೊಟ್ಟ ಮಗ, ತನ್ನ ಮಗ ಬ್ಯಾಂಕ್ ಮ್ಯಾನೇಜರ್ ಆಗಬೇಕು ಅಂತಾ ಹಠ ಹಿಡಿದು ಮಗ ಪೊಲೀಸ್ ಆಫೀಸರ್ ಆಗೋದನ್ನು ತಡೆಯಲು ಯತ್ನಿಸುವ ಅಪ್ಪ. ದುಷ್ಟ ಎಂಎಲ್‌ಎ ಕಾಕದೃಷ್ಟಿಗೆ ಸಿಲುಕಿ ಒದ್ದಾಡುವ ನಾಯಕಿ ಮತ್ತಾಕೆಯ ಫ್ಯಾಮಿಲಿ. ಹುಡುಗಿಗಾಗಿ ಶಾಸಕನನ್ನು ಎದುರುಹಾಕಿಕೊಂಡು ಥೇಟು ಟೈಗರ್ ಥರಾ ಘರ್ಜಿಸೋ ಹುಡುಗ…. ಇಷ್ಟೇ ಆದರೆ ಕತೆ ಮಾಮೂಲಿ ಅನ್ನಿಸಿಬಿಡುತ್ತಿತ್ತೇನೋ. ಆದರೆ ಹಾಗನ್ನಿಸೋ ಮುಂಚೇನೇ ಕತೆ ಫ್ಲಾಷ್ ಬ್ಯಾಕ್‌ಗೆ ಹೊರಳಿಕೊಂಡು ಮುಂಬೈಗೆ ಶಿಫ್ಟ್ ಆಗುತ್ತದೆ. ಹೀರೋ ತಂದೆ ಯಾಕೆ ಮಗ ಪೊಲೀಸ್ ಆಫೀಸರ್ ಆಗೋದನ್ನು ವಿರೋಧಿಸುತ್ತಿರುತ್ತಾನೆ? ಅನ್ನೋ ಅಸಲೀಯತ್ತು ಪ್ರೇಕ್ಷಕರ ಮುಂದೆ ಅನಾವರಣವಾಗುತ್ತದೆ. ಮಾತ್ರವಲ್ಲ, ಹೀರೋ ಟೈಗರ್ ಮಾತ್ರವಲ್ಲ, ಟೈಗರ್ ಹೊಟ್ಟೇಲಿ ಹುಟ್ಟಿದ ಮರಿ ಟೈಗರ್ ಅನ್ನೋದು ಕೂಡಾ ಗೊತ್ತಾಗುತ್ತದೆ. ಈ ಎರಡೂ ಟೈಗರ್‌ಗಳ ದುಷ್ಮನ್‌ಗಳು ಒಂದಾಗಿ ಅಪ್ಪ-ಮಗನನ್ನು ಮಟ್ಟ ಹಾಕುವ ಸಂಚು ರೂಪಿಸುತ್ತಾರೆ. ಆ ಎಲ್ಲ ಸಂಚುಗಳನ್ನೂ ಬೇಧಿಸಿಕೊಂಡು ಟೈಗರುಗಳು ಹೇಗೆ ಗೆಲುವು ಸಾಧಿಸುತ್ತವೆ ಅನ್ನೋದು ಸಿನಿಮಾದ ಅಂತಿಮ ತಿರುಳು!
ಈ ನಡುವೆ ಒಂದಿಷ್ಟು ಹಾಸ್ಯ, ಫ್ಯಾಮಿಲಿ ಸೆಂಟಿಮೆಂಟು, ಗನ್ನು ಹಿಡಿದ ಪೊಲೀಸರ ಗತ್ತು, ಸಮಾಜ ಕಂಟಕರ ಮಿಲಾಕತ್ತು ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದೆ. ಚಿತ್ರಕತೆ ಕತೆ ಬಿಗಿಯಾಗಿದ್ದರೂ ಚಿತ್ರಕತೆ ಎಳೆದಾಡಿದಂತಾಗಿದೆ. ಮಾಸ್ ಹೀರೋ ಆಗುವ ಕನಸು ಹೊತ್ತಿರುವ ಪ್ರದೀಪ್ ಅಬ್ಬರಿಸದೆಯೂ ಒಳ್ಳೇ ನಟನೆ ನೀಡಬಹುದಿತ್ತು. ಇನ್ನು ಚಿತ್ರದ ಅತಿ ದೊಡ್ಡ ಮೈನಸ್ ಪಾಯಿಂಟ್ ಓಲ್ಡ್ ಟೈಗರ್! ಕೈಲಿ ಗನ್ನು ಹಿಡಿದು ಕ್ರಿಮಿಗಳನ್ನು ಕೊಂದು, ಸಮಾಜ ಕಲ್ಯಾಣ ಮಾಡುವ ಅಧಿಕಾರಿಯ ಪಾತ್ರದಲ್ಲಿ ಕೆ. ಶಿವರಾಮ್ ಅವರ ನಟನೆ ಸಪ್ಪೆ ಸಪ್ಪೆ. ಈ ಪಾತ್ರಕ್ಕೆ ಶಿವರಾಮ್ ಅಕ್ಷರಶಃ ಅನ್ ಫಿಟ್. ಈ ಪಾತ್ರವನ್ನು ಬೇರೆ ಯಾವುದೇ ಹಿರಿಯ ನಟ ನಿಭಾಯಿಸಿದ್ದಲ್ಲಿ ಚಿತ್ರದ ತೂಕವೇ ಬೇರೆಯಾಗಿರುತ್ತಿತ್ತು. ನಟ ರವಿಶಂಕರ್ ಅವರದ್ದು ಎದುರು ಯಾರೇ ನಿಂತರೂ ಅವರನ್ನು ನುಂಗಿಹಾಕುವಂತಾ ನಟನೆ. ಅಪರೂಪಕ್ಕೆನ್ನುವಂತೆ ಚಿಕ್ಕಣ್ಣ ಮತ್ತು ಸಾಧು ಕೋಕಿಲಾ ಕಾಮಿಡಿ ಸಖತ್ ವರ್ಕೌಟ್ ಆದಂತಿದೆ. ಛಾಯಾಗ್ರಹಣ, ಸಂಗೀತ, ಹಿನ್ನೆಲೆ ಸಂಗೀತ ಮತ್ತು ನಿರ್ದೇಶನ ಎಲ್ಲವೂ ಹದವಾಗಿವೆ. ಒಂದು ಸಲ ನೋಡಬಹುದಾದ ಮನರಂಜನಾ ಸಿನಿಮಾ ಟೈಗರ್…

Share.

Leave A Reply