ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಲೀಡರ್‌ಗೆ ವೀರ್ ‘ಸಮರ್ಥ’ ಸಂಗೀತದ ಸಾಥ್!

0

ಇನ್ನೊಂದು ದಿನ ಕಳೆದರೆ ಶಿವರಾಜ್ ಕುಮಾರ್ ಅಭಿನಯದ `ಮಾಸ್ ಲೀಡರ್ ಚಿತ್ರ ತೆರೆ ಕಾಣಲಿದೆ. ಆರಂಭದಿಂದ ಈ ವರೆಗೂ ಒಂದಲ್ಲ ಒಂದು ಕಾರಣದಿಂದ ಕೌತುಕದ ಕೇಂದ್ರ ಬಿಂದುವಾಗಿದ್ದ ಈ ಚಿತ್ರ ಸದ್ಯ ಸದ್ದು ಮಾಡುತ್ತಿರೋದು ಸುಂದರವಾದ ಹಾಡುಗಳಿಂದ. ವೀರ್ ಸಮರ್ಥ್ ಅವರ ಸಂಗೀತ ಸಂಯೋಜನೆಯ ಎಲ್ಲ ಹಾಡುಗಳೂ ಸಹ ವಿಶೇಷ ಫೀಲ್ ನೀಡೋ ಮೂಲಕ ಎಲ್ಲರನ್ನು ಆವರಿಸಿಕೊಂಡಿರೋದು ಲೀಡರ್ ಚಿತ್ರದ ಲೇಟೆಸ್ಟ್ ಮೋಡಿ!

ಒಂದು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಒಪ್ಪಿಕೊಂಡರೆ ಅದನ್ನು ಸಂಪೂರ್ಣವಾಗಿ ಆವಾಹಿಸಿಕೊಂಡು ಧ್ಯಾನದಂತೆ ಮಗ್ನರಾಗೋದು ವೀರ್ ಸಮರ್ಥ್ ಅವರ ಹೆಚ್ಚುಗಾರಿಕೆ. ಈಗಾಗಲೇ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅವರು ಹತ್ತಾರು ಚಿತ್ರಗಳಿಗೆ ಸುಮಧುರ ಹಾಡುಗಳಿಗೆ ಜೀವ ತುಂಬಿದ್ದಾರೆ. ಆದರೆ ಲೀಡರ್ ಅವರ ಪಾಲಿಗೆ ಮೊದಲ ದೊಡ್ಡ ಮಟ್ಟದ ಮಾಸ್ ಚಿತ್ರ.
ಆದ್ದರಿಂದಲೇ ಈ ಚಿತ್ರಕ್ಕಾಗಿ ವೀರ್ ಸಮರ್ಥ್ ಅಚ್ಚರಿದಾಯಕವಾಗಿಯೇ ಸಮಯ ವಿನಿಯೋಗಿಸಿದ್ದಾರೆ. ಅಷ್ಟಕ್ಕೂ ಲೀಡರ್ ಚಿತ್ರಕ್ಕೆ ಅವರು ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದು ೨೦೧೪ರ ಸೆಪ್ಟಂಬರ್ ತಿಂಗಳಲ್ಲಿ. ಆ ಹೊತ್ತಿಗಿನ್ನೂ ಚಿತ್ರ ಟೈಟಲ್ಲು ನಿಕ್ಕಿ ಮಾಡಿಕೊಳ್ಳೋ ಆರಂಭಿಕ ಹಂತದಲ್ಲಿತ್ತು. ಶಿವಣ್ಣ ಈ ಚಿತ್ರಕ್ಕೆ ಒಪ್ಪಿಕೊಂಡಿದ್ದರೂ ಡೇಟ್ ಇನ್ನೂ ಪಕ್ಕಾ ಆಗಿರಲಿಲ್ಲ. ಆದರೆ ವೀರ್ ಸಮರ್ಥ್ ಅದಾಗಲೇ ತಮ್ಮ ಕೆಲಸಕ್ಕೆ ಚಾಲನೆ ನೀಡಿದ್ದರು!
ಹಾಗೆ ಕೆಲಸ ಆರಂಭಿಸಿದ ವೀರ್ ಸಮರ್ಥ್ ಅವರು ಮೊದಲು ಶುರು ಮಾಡಿದ್ದು ಟೈಟಲ್ ಸಾಂಗ್ ಅನ್ನು. ಆ ನಂತರ ಕೈಗೆತ್ತಿಕೊಂಡಿದ್ದು ಐಟಂ ಸಾಂಗ್. ಈ ಹಾಡು ಅರೇಬಿಕ್ ಶೈಲಿಯಲ್ಲಿರಬೇಕೆಂಬುದು ನಿರ್ದೇಶಕರ ಬೇಡಿಕೆಯಾಗಿತ್ತು. ಚಿತ್ರದ ಕಥೆ ಕೂಡಾ ಅದಕ್ಕೆ ಪೂರಕವಾಗಿರೋದರಿಂದ ಅದನ್ನು ಗೋವಾದಲ್ಲಿ ಶೂಟ್ ಮಾಡೋದಾಗಿಯೂ ನಿಗಧಿ ಮಾಡಲಾಗಿತ್ತು. ಈ ಹಾಡಿನ ಸಾಹಿತ್ಯ, ಕಂಪೋಸಿಂಗ್ ಎಲ್ಲ ಮುಗಿದಾದ ಮೇಲೆ ಇದನ್ನು ಯಾರ ಬಳಿ ಹಾಡಿಸೋದೆಂಬ ಪ್ರಶ್ನೆ ಮೂಡಿತ್ತು. ಕಡೆಗೂ ಅದಕ್ಕಾಗಿ ಸುಪ್ರಿಯಾ ಲೋಹಿತ್ ನಿಕ್ಕಿಯಾಗಿದ್ದರು. ವಿಭಿನ್ನವಾದ ಧ್ವನಿ ಏರಿಳಿತದ ಹಾಡನ್ನು ಸುಪ್ರಿಯಾ ಅದ್ಭುತವಾಗಿ ಹಾಡಿದ್ದರು. ಈ ಹಿಂದೆ ನಿನ್ನ ಧ್ವನಿಗಾಗಿ ನಿನ್ನ ಕರೆಗಾಗಿ ಹಾಡೂ ಸೇರಿದಂತೆ ಹಲವಾರು ಹಾಡು ಹಾಡಿದ್ದರೂ ಸುಪ್ರಿಯಾಗೆ ಭಾರೀ ಹೆಸರು ತಂದು ಕೊಟ್ಟಿದ್ದು ಈ ಹಾಡಿನ ಹೆಚ್ಚುಗಾರಿಕೆ.
ವಿಭಿನ್ನವಾಗಿರೋ ಈ ಹಾಡನ್ನು ಟೆಕ್ನಿಷಿಯನ್‌ಗಳೇ ಮೆಚ್ಚಿಕೊಂಡಿರೋದು ವಿಶೇಷ. ಹೆಚ್ಚಿನ ಸಲ ಭಾರೀ ಫೇಮಸ್ಸಾದ ಹಾಡುಗಳೂ ತಂತ್ರಜ್ಞರ ಪಾಲಿಗೆ ಅತೀ ಸಾಮಾನ್ಯವಾಗಿರುತ್ತದೆ. ಆದ್ದರಿಂದಲೇ ಇವರ ಬಳಿ ಮೆಚ್ಚುಗೆ ಗಳಿಸೋದು ಕಷ್ಟದ ವಿಚಾರ. ಆದರೆ ಆಬಿದಾ ಆಬಿದಾ ಎಂಬ ಈ ಹಾಡು ಸಿನಿಮಾ ತಂತ್ರಜ್ಞರನ್ನು ಸೆಳೆಯುವ ಜೊತೆಗೆ ಬಹು ಬೇಗನೆ ಜನರಿಗೂ ರೀಚ್ ಆಗುವಲ್ಲಿ ಸಫಲವಾಗಿದೆ.
ಇನ್ನುಳಿದಂತೆ ಇತರೇ ಗಾಡುಗಳನ್ನು ಇಂದೂ ನಾಗರಾಜ್ ಸೇರಿದಂತೆ ಅನೇಕರು ಚೆಂದಗೆ ಹಾಡಿದ್ದಾರೆ. ಇಡೀ ಆಲ್ಬಂನ ಸೌಂಡಿಗ್ ಬೇರೆ ರೀತಿಯಲ್ಲಿದೆ ಎಂಬ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಇಲ್ಲಿನ ಎಲ್ಲ ಹಾಡುಗಳೂ ಕೂಡಾ ಬಾಲಿವುಡ್ ಫೀಲ್ ಕೊಡುತ್ತಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅದೂ ಕೂಡಾ ವೀರ್ ಸಮರ್ಥ ಅವರ ಆಯ್ಕೆಯ ಎಫೆಕ್ಟ್. ಈ ಆಲ್ಬಂಗಾಗಿ ಕೆಲಸ ಮಾಡಿರೋ ತಂತ್ರಜ್ಞರ ಟೀಮೇ ಅಂತಾದ್ದಿದೆ!
ಎ ಆರ್ ರೆಹಮಾನ್ ಅವರ ಬಳಿ ಕೆಲಸ ಮಾಡಿರೋ ತಂತ್ರಜ್ಞರ ದಂಡನ್ನೇ ಈ ಆಲ್ಬಂಗಾಗಿ ವೀರ್ ಸಮರ್ಥ್ ಕನ್ನಡಕ್ಕೆ ಕರೆ ತಂದಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಮುಂತಾದ ಘಟಾನುಘಟಿಗಳ ಜೊತೆ ಕೆಲಸ ಮಾಡಿರೋ ತನೈ ಗಜ್ಜರ್ ಲೀಡರ್ ಚಿತ್ರದ ಐಟಂ ಸಾಂಗ್ ಮಿಕ್ಸಿಂಗ್ ಮಾಡಿದ್ದಾರೆ. ಪ್ರೋಗ್ರಾಮರ್, ಸಾಂಗ್ ಅರೇಂಜರ್ ಆಗಿ ಎ ಆರ್ ರೆಹಮಾನ್ ಟೀಮ್‌ನ ಪ್ರದೀಪ್ ವರ್ಮಾ ಕಾರ್ಯ ನಿರ್ವಹಿಸಿದ್ದಾರೆ. ಭಾಗ್ ಮಿಲ್ಕಾ ಭಾಗ್ ಚಿತ್ರದಲ್ಲಿ ಕೆಲಸ ಮಾಡಿದ್ದ ಪಬ್ಬಿ ಸೌಂಡ್ ಪ್ರೋಗ್ರಾಮಿಂಗ್ ಮಾಡಿದ್ದಾರೆ. ಕವಿರಾಜ್, ವಿ ನಾಗೇಂದ್ರ ಪ್ರಸಾದ್ ಅವರ ಚೆಂದದ ಸಾಹಿತ್ಯ ಮತ್ತಯ ವೀರ್ ಸಮರ್ಥ್ ಅವರ ಸಮರ್ಥ ಸಂಗೀತದ ಜೊತೆಗೆ ಲೀಡರ್ ಹಾಡುಗಳು ಸಖತ್ ಮೋಡಿ ಮಾಡಿವೆ.
ಕನ್ನಡ ಮತ್ತು ತಾಯಿ ಭುವನೇಶ್ವರಿಯ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಹಾಡುಗಳು ಬಂದಿವೆ. ಆದರೆ ದೇಶಭಕ್ತಿಯ ಹಾಡುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ತುಸು ವಿರಳ. ಆದರೆ ಈ ಚಿತ್ರಕ್ಕಾಗಿ ಚೆಂದದ ದೇಶ ಭಕ್ತಿಗೀತೆಯನ್ನೂ ಸಮರ್ಥ ಕಟ್ಟಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಲೀಡರ್ ಚಿತ್ರದ ಹಾಡುಗಳು ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿವೆ. ಈ ಮೂಲಕ ಎರಡೂವರೆ ವರ್ಷದ ವೀರ್ ಸಮರ್ಥ್ ಅವರ ಸುದೀರ್ಘ ತಪಸ್ಸು ಸಾರ್ಥಕವಾಗಿದೆ.

Share.

Leave A Reply