ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಮಾಸ್ತಿ ಗುಡಿಯಲ್ಲಿ ಏನೇನಿದೆ?

2

‘ಮಾಸ್ತಿಗುಡಿ ನನ್ನ ಕನಸಿನ ಚಿತ್ರ. ಒಂದಿಡೀ ಟೀಮು ಒಟ್ಟಿಗೇ ಇದ್ದು ಭಾರೀ ಶ್ರಮ ವಹಿಸಿ ಮಾಡಿದ ಚಿತ್ರ. ಆದರೆ ಆ ನಂತರ ನಡೆದ ವಿದ್ಯಮಾನಗಳು, ಗೆಳೆಯರ ಅಗಲಿಕೆ, ಟ್ರೈಲರಿನಲ್ಲಿ ಕಾಣಿಸಿಕೊಂಡಿದ್ದ ಹುಲಿಗೆ ಸಂಬಂಧಿಸಿದ ವಿವಾದ ಮತ್ತು ಸಿನಿಮಾ ಅಂದುಕೊಂಡಂತೆ ರಿಲೀಸಾಗೋದೇ ಡೌಟು ಎಂಬಂಥಾ ರೂಮರ್‌ಗಳಾಚೆಗೆ ಮಾಸ್ತಿಗುಡಿಯ ಅಂತಿಮ ಹಂತದ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ಚಿತ್ರ ಖಂಡಿತವಾಗಿಯೂ ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತದೆ… ಮಾಸ್ತಿಗುಡಿ ಚಿತ್ರಕ್ಕೆ ಸುತ್ತಿಕೊಂಡ ಎಲ್ಲ ಕಂಟಕಗಳನ್ನೂ ಹೀಗೆ ಒಂದೇ ಉಸಿರಿಗೆ ನಿವಾಳಿಸಿ ಎಸೆದಂತೆ ಸ್ಪಷ್ಟೀಕರಣ ನೀಡಿ ನಿಸೂರಾದವರು ನಿರ್ದೇಶಕ ನಾಗಶೇಖರ್!

 ಅವರ ಧ್ವನಿಯಲ್ಲಿ ಎಲ್ಲ ಸಂತಸಗಳನ್ನೂ ಆವರಿಸಿಕೊಂಡ ನೋವು ಮಾತ್ರ ಸ್ಪಷ್ಟವಾಗಿ ಗೋಚರವಾಗುವಂತಿತ್ತು. ದುನಿಯಾ ವಿಜಯ್ ಅಭಿನಯದ ಈ ಚಿತ್ರ ಡಿಫರೆಂಟಾದೊಂದು ಕಥೆ ಹೊಂದಿದೆ ಎಂಬ ಬಗ್ಗೆ ಆರಂಭದಿಂದಲೂ ಸದ್ದು ಮಾಡಿತ್ತು. ಆ ನಂತರದಲ್ಲಿ ಚಿತ್ರದ ಬಗ್ಗೆ ಒಂದೊಂದೇ ವಿಚಾರ ಹೊರ ಬೀಳುತ್ತಿದ್ದಂತೆಯೇ ಇದು ಬಿಗ್ ಹಿಟ್ಟಾಗೋದು ಖರೇ ಎಂಬಂಥಾ ವಾತಾವರಣವೇ ಮನೆ ಮಾಡಿತ್ತು. ಅಷ್ಟರಲ್ಲಿಯೇ ನಡೆದದ್ದು ಕ್ಲೈಮ್ಯಾಕ್ಸ್ ದುರಂತ. ಇದರಲ್ಲಿ ಪ್ರತಿಭಾವಂತ ಯುವ ನಟರಾದ ಅನಿಲ್ ಮತ್ತು ಉದಯ್ ಸಾವಿಗೀಡಾದದ್ದು, ಕೇಸು, ಜೈಲು… ಇದೆಲ್ಲವನ್ನೂ ಅನುಭವಿಸಿ ಮತ್ತೆ ಸಿನಿಮಾ ತೆಕ್ಕೆಗೆ ಬಿದ್ದ ಚಿತ್ರತಂಡಕ್ಕೆ ಬಿಗ್ ರಿಲೀಫ್ ಕೊಟ್ಟಿದ್ದು ಈ ಚಿತ್ರದ ಹಾಡುಗಳ ಗೆಲುವು. ಆದರೆ ಟ್ರೈಲರಿನಲ್ಲಿ ಕಾಣಿಸಿಕೊಂಡಿದ್ದು ಹುಲಿಯ ವಿಚಾರವಾಗಿ ಮತ್ತೆ ವಿವಾದ, ಮತ್ತದೇ ಅವಮಾನ… ಇದೆಲ್ಲದಕ್ಕೆ ಕ್ಲಾರಿಫಿಕೇಷನ್ನು ನೀಡುವ ಉದ್ದೇಶದಿಂದಲೇ ಹಠಾತ್ತಾಗಿ ಪತ್ರಿಕಾ ಗೋಷ್ಟಿ ಕರೆದಿದ್ದ ಚಿತ್ರತಂಡ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟಿದೆ…

ಈಗ ಬಂದಿರೋದು ನಮ್ದೇ ಹುಲಿ!
ಮಾಸ್ತಿಗುಡಿ ಚಿತ್ರದ ಟ್ರೈಲರ್ ತನ್ನ ವಿಶಿಷ್ಟ ಛಾಯೆಯಿಂದಾಗಿ ಭಾರೀ ಸದ್ದು ಮಾಡಿತ್ತು. ಎಲ್ಲ ಸಂಕಟವನ್ನೂ ಮೀರಿಸುವಂತೆ ಈ ಚಿತ್ರ ಹಿಟ್ ಆಗೋದು ಗ್ಯಾರೆಂಟಿ ಎಂಬುದಾಗಿ ಚಿತ್ರ ಪ್ರೇಮಿಗಳು ಮಾತಾಡಿಕೊಳ್ಳುವಂತಾಗಿತ್ತು. ಆದರೆ ಇದರ ಬೆನ್ನಿಗೇ ಈ ಟ್ರೈಲರಿನಲ್ಲಿ ಕಾಣಿಸಿಕೊಂಡಿದ್ದ ಹುಲಿಯ ಚಿತ್ರಣವನ್ನು ಕೊರಿಯನ್ ಚಿತ್ರವೊಂದರಿಂದ ಯಥಾವತ್ತಾಗಿ ಭಟ್ಟಿ ಇಳಿಸಿಕೊಳ್ಳಲಾಗಿದೆ ಎಂಬೊಂದು ವಿಚಾರ ಡಿಜಿಟಲ್ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೀಡಾಗಿತ್ತು. ಇದರ ಬೆನ್ನಿಗೇ ಈ ಚಿತ್ರದ ಕಥೆಯನ್ನೂ ಕೂಡಾ ಕೊರಿಯನ್ ಸಿನಿಮಾಗಳಿಂದಲೇ ರತ್ತಿಕೊಂಡಿದ್ದಾರೆಂಬ ಬಗ್ಗೆಯೂ ಅಪಪ್ರಚಾರ ಹರಿದಾಡಿತ್ತು. ಇದರ ಬಗ್ಗೆಯೂ ನಾಗಶೇಖರ್ ಸುಧೀರ್ಘ ವಿವರಣೆಯನ್ನೇ ಕೊಟ್ಟಿದ್ದಾರೆ.
ದುನಿಯಾ ವಿಜಿ ಅವರ ಬರ್ತಡೆಗೆ ಮಾಸ್ತಿಗುಡಿಯ ಟ್ರೈಲರ್ ಲಾಂಚ್ ಮಾಡಬೇಕೆಂಬುದು ನಾಗಶೇಖರ್ ಆಸೆಯಾಗಿತ್ತು. ಚಿತ್ರದ ಪ್ರತಿಯೊಂದು ಸನ್ನಿವೇಶಗಳ ಬಗ್ಗೆಯೂ ಹೋಂ ವರ್ಕ್ ಮಾಡಿಕೊಂಡಿದ್ದ ನಾಗಶೇಖರ್, ಇದರಲ್ಲಿನ ಹುಲಿಯ ಗ್ರಾಫಿಕ್ಸ್ ಬಗ್ಗೆಯೂ ಸ್ಪಷ್ಟವಾಗಿಯೇ ರೂಪುರೇಷೆ ಸಿದ್ಧ ಮಾಡಿಕೊಂಡಿದ್ದರಂತೆ. ಆದರೆ ವಿಜಿ ಹುಟ್ಟು ಹಬ್ಬ ಹತ್ತಿರ ಬಂದಿದ್ದರಿಂದಾಗಿ ಇಲ್ಲಿ ಗ್ರಾಫಿಕ್ಸ್ ಸಿದ್ಧ ಮಾಡಲು ಸಮಯಾವಕಾಶಗಳ ಕೊರತೆ ಕಾಡಿತ್ತು. ಅಚಾತುರ್ಯ ಸಂಭವಿಸಿದ್ದು ಬಹುಶಃ ಆವಾಗಲೇ!
ವಿಜಿ ಬರ್ತಡೆ ಗೆ ಟ್ರೈಲರ್ ಲಾಂಚ್ ಮಾಡಿಯೇ ತೀರುವ ಛಾಲೆಂಜಿದ್ದಿದ್ದರಿಂದ ಹುಲಿಯನ್ನು ಬೇಗನೆ ಅಣಿ ಮಾಡುವ ಅನಿವಾರ್ಯತೆ ಇತ್ತು. ಆದರೆ ಈ ನಡುವೆಯೂ ಮಾಸ್ತಿಗುಡಿಯ ಹುಲಿಗೆ ಜೀವ ತುಂಬೋ ಕಾರ್ಯ ಚಾಲ್ತಿಯಲ್ಲಿತ್ತು. ಮತ್ತದು ಇತ್ತೀಚೆಗಷ್ಟೇ ಸಿದ್ಧವೂ ಆಗಿತ್ತು. ಈ ಕೊರಿಯನ್ ಹುಲಿಯ ಗುಲ್ಲೆದ್ದೇಟಿಗೇ ಪಕ್ಕಾ ಮಾಸ್ತಿಗುಡಿ ಹುಲಿಯನ್ನು ಲಾಂಚ್ ಮಾಡಿದರೂ ಅದು ಸುದ್ದಿಯಾಗಲೇ ಇಲ್ಲ ಎಂಬುದು ನಾಗಶೇಖರ್ ಅಳಲು.
(ಮುಂದುವರೆಯುತ್ತದೆ…)

  • ಅರುಣ್
Share.

2 Comments

  1. ಕುಮಾರ್ ಶೃಂಗೇರಿ on

    ಈಗ ಬಂದಿರುವುದು ಬಾಡಿಗೆ ಹುಲಿನೋ ಅಥವಾ ನಾಗಶೇಖರ್ ರ ಸ್ವಂತ ಹುಲಿನೋ?

Leave A Reply