ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಬಾಹುಬಲಿಯ ಕಾಲ್ತುಳಿತಕ್ಕೆ ಸಿಕ್ಕವರ ಆರ್ತ‘ರಾಗ!

0


ಕನ್ನಡ ಚಿತ್ರಗಳನ್ನೇ ಥಂಡಾ ಹೊಡೆಸುವಂಥಾ ಬಾಹುಬಲಿಯ ಅಬ್ಬರ ಕರ್ನಾಟಕದ ತುಂಬಾ ಜೋರಾಗಿದೆ. ಅಷ್ಟಾಗಿ ಸಿನಿಮಾಗಳನ್ನು ನೋಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡಾ ೧೦೪೦ ರೂಪಾಯಿ ತೆತ್ತು ಟಿಕೆಟು ಪಡೆದು ಬಾಹುಬಲಿಯ ದರ್ಶನ ಪಡೆದು ಕೃತಾರ್ಥರಾಗಿದ್ದಾರೆ!
ಹೀಗಿರುವಾಗಲೇ ಬಾಹುಬಲಿಯ ತುಳಿತಕ್ಕೊಳಗಾಗಿ ಥೇಟರುಗಳಿಂದ ತಳ್ಳಲ್ಪಟ್ಟ ‘ರಾಗ ಚಿತ್ರದ ನಿರ್ಮಾಪಕ ಕಂ ನಟ ಮಿತ್ರ ತಮ್ಮ ಚಿತ್ರಕ್ಕಾಗಿರೋ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಹವಾಲು ಪತ್ರವೊಂದನ್ನು ಕೊಟ್ಟಿದ್ದಾರೆ. ತಮ್ಮ ಅಳಲನ್ನೂ ತೋಡಿಕೊಂಡಿದ್ದಾರೆ!
ಪಿ ಸಿ ಶೇಖರ್ ನಿರ್ದೇಶನದ ‘ರಾಗ ಚಿತ್ರವನ್ನು ತಾವೇ ನಿರ್ಮಾಣ ಮಾಡಿ ಅಂಧನ ಪಾತ್ರದಲ್ಲಿ ಅಭಿನಯಿಸಿರುವವರು ನಟ ಮಿತ್ರಾ. ಅಂಧರ ಬದುಕಿನ ನಾನಾ ಮಗ್ಗುಲುಗಳನ್ನು ಅನಾವರಣಗೊಳಿಸುವ ಮನಮುಟ್ಟುವ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದರು. ಆದರೆ, ಈ ಚಿತ್ರ ಥೇಟರಿನಲ್ಲಿ ಕಚ್ಚಿಕೊಂಡು ಕುದುರಿಕೊಳ್ಳಬೇಕೆಂಬಷ್ಟರಲ್ಲಿಯೇ ತೆಲುಗಿನ ಬಾಹುಬಲಿಯ ಹಾವಳಿ ಶುರುವಾಗಿ ಹೋಗಿತ್ತು. ಇದಾದೇಟಿಗೇ ಬಹುತೇಕ ಎಲ್ಲ ಚಿತ್ರಮಂದಿರಗಳಿಂದಲೂ ಅನ್ಯಾಯವಾಗಿ ಈ ಚಿತ್ರವನ್ನು ಹೊರ ದಬ್ಬಲಾಯ್ತು.
ಇಂಥಾದ್ದೊಂದು ಸಂಕಟ ಹೊತ್ತು ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿರೋ ಮಿತ್ರ ಸುದೀರ್ಘವಾದ ಪತ್ರವೊಂದರ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಒಂದಷ್ಟು ಮನವಿಯನ್ನೂ ಸಲ್ಲಿಸಿದ್ದಾರೆ. ಬಾಹುಬಲಿ ಚಿತ್ರವನ್ನು ನೋಡಿದಂತೆಯೇ ಅಂಧರ ಬದುಕಿಗೆ ಕಣ್ಣಾದ ತಮ್ಮ ‘ರಾಗ ಚಿತ್ರವನ್ನೂ ನೋಡುವಂತೆ ಸಿಎಂಗೆ ಮನವಿ ಮಾಡಿಕೊಂಡಿರೋ ಮಿತ್ರ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಮತ್ತು ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಸುತ್ತೋಲೆ ಹೊರಡಿಸಿ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳು ರಾಗ ಚಿತ್ರವನ್ನು ನೋಡಲು ಅನುವು ಮಾಡಿಕೊಡಬೇಕೆಂದೂ ಮನವಿ ಮಾಡಿದ್ದಾರೆ.
ಇದೀಗ ಬಾಹುಬಲಿ ರಾಜ್ಯದ ಶೇಖಡಾ ಎಂಭತ್ತರಷ್ಟು ಚಿತ್ರಮಂದಿರಗಳನ್ನು ಆವರಿಸಿಕೊಂಡಿದೆ. ಇದರ ಭರಾಟೆಯಿಂದಾಗಿ ರಾಗದಂಥಾ ಚಿತ್ರಗಳು ಸಂಕಷ್ಟಕ್ಕೆ ಸಿಲುಕಿದೆ. ಈ ಚಿತ್ರದಿಂದ ಬಂದ ಕಾಸನ್ನು ಅಂಧರ ಯೋಗಕ್ಷೇಮಕ್ಕೇ ವಿನಿಯೋಗಿಸುವ ಔದಾರ್ಯ ಹೊಂದಿರುವ ಮಿತ್ರ ಅವರ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಭೀರವಾಗಿ ಪರಿಗಣಿಸಬೇಕಿದೆ.

Share.

Leave A Reply