ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ನಾನೇನು ಸಾಚಾ ಅಲ್ಲ ಅಂದರು ಶಿವಣ್ಣ!

0

“ತಪ್ಪು ಮಾಡೋದು ಸಹಜಾ ಕಣೋ… ತಿದ್ದಿ ನಡೆಯೋನು ಮನುಜಾ ಕಣೋ ಅನ್ನೋ ಹಾಡಿದೆಯಲ್ಲಾ? ಅದೇ ಫಿಲಾಸಫಿಯನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕೂಡಾ ಅಕ್ಷರಶಃ ಪಾಲಿಸುವ ಮಾತುಗಳನ್ನಾಡಿದ್ದಾರೆ.

ಶಿವಣ್ಣನ ಮಾತೇ ಹಾಗೆ… ಒಮ್ಮೆ ತುಂಟತನ-ತಮಾಷೆ, ಮತ್ತೊಮ್ಮೆ ಆಧ್ಯಾತ್ಮ, ಇದ್ದಕ್ಕಿದ್ದಂತೆ ವೇದಾಂತ ಎಲ್ಲವೂ ಸೇರಿಕೊಂಡಿರುತ್ತದೆ. ಬಹುಶಃ ಬದುಕಿನ ಎಲ್ಲ ಮಜಲುಗಳನ್ನೂ ಅನುಭವಿಸಿದವರ ಬಾಯಲ್ಲಿ ಸೃಷ್ಟಿಗೊಳ್ಳುವ ನುಡಿಗಳವು.
ನಮ್ ಟಾಕೀಸ್‌ನ ಮಧು ಬಸವರಾಜ್ ಮತ್ತು ಅಜಿತ್ ಕುಮಾರ್ ಸೇರಿ ನಿರ್ಮಿಸಿರುವ ‘ಡೇಸ್ ಆಫ್ ಬೋರಾಪುರ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಣ್ಣ ಆಡಿದ ಅನುಭವದ ಮಾತುಗಳು ಎಷ್ಟೋ ಜನ ಯುವ ನಟರಿಗೆ ಜೀವನ ಪಾಠದಂತಿತ್ತು.
‘ಬದುಕಲ್ಲಿ ಒಳ್ಳೇದೂ ಇರತ್ತೆ ಕೆಟ್ಟದ್ದೂ ಇರತ್ತೆ. ತುಂಬಾ ಹಾನೆಸ್ಟ್ ಆಗಿದ್ದರೂ ಕಷ್ಟ ತುಂಬಾ ಕೇರ್ ಲೆಸ್ ಆದರೂ ಕಷ್ಟ. ಎರಡನ್ನೂ ಬ್ಯಾಲೆನ್ಸ್ ಮಾಡಬೇಕು ಅಷ್ಟೇ. ಇಲ್ಲಿ ಯಾರೂ ಪರಿಪೂರ್ಣರಲ್ಲ. ಯಾರು ದೊಡ್ಡವರೂ ಅಲ್ಲ, ಯಾರೂ ಚಿಕ್ಕವರೂ ಅಲ್ಲ. ಎಲ್ಲ ತಪ್ಪು ಮಾಡೋರೇ. ನಾನೇನು ಸಾಚಾ ಅಲ್ಲ. ನಾನು ಕೂಡಾ ಮನುಷ್ಯಸಹಜ ತಪ್ಪುಗಳನ್ನು ಮಾಡಿರುವವನೇ. ನನ್ನ ಬಳಿ ಯಾರೇ ಬಂದು ನೀವು ಮಾಡಿದ್ದು ತಪ್ಪು ಅಂದಾಗ ಮತ್ತು ಅದು ನಿಜಕ್ಕೂ ತಪ್ಪು ಅಂತಾ ಗೊತ್ತಾದಾಗ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡ್ತೀನಿ.. ಬಹುಶಃ ನಾನು ಇವತ್ತಿಗೂ ಇಷ್ಟು ಬ್ಯುಸಿಯಾಗಿರಲು ಅದೇ ಕಾರಣವಾಗಿರಬಹುದು. ನನ್ನ ಸಿನಿಮಾ ರಿಲೀಸ್ ಆದಾಗ ಒಂದಷ್ಟು ಜನರ ಮೆಸೇಜ್‌ಗಾಗಿ ಕಾದಿರುತ್ತೀನಿ. ಮಧು ಅವರಂತಾ ಹುಡುಗರು ನೇರವಾಗಿ ಮೆಸೇಜ್ ಮಾಡ್ತಾರೆ. ‘ನಮಗೆ ಯಾಕೋ ಈ ಪಾತ್ರ ಅಷ್ಟು ಇಷ್ಟ ಆಗಲಿಲ್ಲ. ನಾವು ಬೇರೆಯದ್ದನ್ನೇ ನಿರೀಕ್ಷಿಸಿದ್ದೆವು ಅಂತಾ. ಮೀಡಿಯಾದವರೊಂದಿಗೆ ನಾನು ತುಂಬಾ ಫ್ರೆಂಡ್ಲಿ ಆದ ರಿಲೇಷನ್ ಶಿಪ್ಪು ಹೊಂದಿದ್ದೀನಿ. ಎದುರಿಗೆ ಸಿಕ್ಕಾಗ ಎಷ್ಟೇ ಚನ್ನಾಗಿ ಮಾತಾಡಿದರೂ ಸಿನಿಮಾದ ವಿಚಾರ ಬಂದಾಗ ನನ್ನ ತಪ್ಪು ಒಪ್ಪುಗಳನ್ನು ಮುಲಾಜಿಲ್ಲದೇ ಬರೆಯುತ್ತಾರೆ. ನಾನದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ… ಹೀಗೆ ಶಿವಣ್ಣ ಪಕ್ಕಾ ‘ಸಂತನಂತೆ ಮಾತಾಡಿದರು.
‘ಡೇಸ್ ಆಫ್ ಬೋರಾಪುರ ಸಿನಿಮಾದಲ್ಲಿ ಏನೋ ಒಂದು ಹೊಸತನವಿದೆ. ಈ ಸಿನಿಮಾದ ಹಾಡುಗಳು, ಟ್ರೇಲರ್ ಎಲ್ಲವನ್ನೂ ನೋಡಿದ್ದೀನಿ. ತುಂಬಾನೇ ಇಂಟರೆಸ್ಟಿಂಗ್ ಆಗಿದೆ. ಇದೇ ರೀತಿ ಹೊಸಾ ಹೀರೋಗಳು, ಡೈರೆಕ್ಟರುಗಳು ಇಂಡಸ್ಟ್ರಿಗೆ ಪರಿಚಯವಾಗಬೇಕು ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

Share.

Leave A Reply