ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಚಾರ್ಲಿ ಚಾಪ್ಲಿನ್: ಒಂದು ಅಪರೂಪದ ಸಂದರ್ಶನ

0

ನಗು ನಗಿಸುತ್ತಲೇ ಅಳಿಸಿದ, ಹೊರಗಣ್ಣಿನಿಂದ ನೋಡುತ್ತಿದ್ದ ಪ್ರೇಕ್ಷಕರ ಒಳಗಣ್ಣನ್ನೂ ತೆರೆಸಬಲ್ಲವನಾಗಿದ್ದ ಜಗತ್ ಪ್ರಸಿದ್ಧ ಚಿತ್ರನಟ ಚಾರ್ಲಿ ಚಾಪ್ಲಿನ್‌ನ ಅಪರೂಪದ ಸಂದರ್ಶನ ಇದು.
ದಿ ಗೋಲ್ಡ್ ರಶ್, ದಿ ಕಿಡ್, ಮಾಡ್ರನ್ ಟೈಮ್ಸ್, ದಿ ಗ್ರೇಟ್ ಡಿಕ್ಟೇಟರ್, ಸಿಟಿ ಲೈಟ್ಸ್ ಮುಂತಾದ ಸಿನಿಮಾಗಳನ್ನು ಚಾಪ್ಲಿನ್ ತೆಗೆದಾಗ ಅದಿನ್ನೂ ಮೂಕಿ ಸಿನಿಮಾ ಯುಗ.
ಇಂಗ್ಲೆಂಡಿನ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ತಬ್ಬಲಿ ಸ್ಥಿತಿ ಅನುಭವಿಸುತ್ತಾ ಕೊನೆಗೆ ಅಮೆರಿಕಾಗೆ ಹೋದ ಚಾಪ್ಲಿನ್ ಇಡೀ ಮನುಷ್ಯ ಕುಲದ ಸಾಕ್ಷಿಪ್ರಜ್ಞೆಯನ್ನು ಕೆಣಕಿದ, ಅಣಕಿಸಿದ, ನಗಿಸಿದ, ನಲಿಸಿ ಕಣ್ಣೀರೂ ತರಿಸಿದ.
ರಿಚರ್ಡ್ ಮೇರಿಮೆನ್ ಎಂಬುವರೊಂದಿಗೆ ಚಾಪ್ಲಿನ್ ನಡೆಸಿದ ಮಾತುಕತೆ ಬಹುಶಃ ಅವನ ವ್ಯಕ್ತಿತ್ವ ಬಿಂಬಿಸುವ ಅಪರೂಪದ ಹಾಗೂ ಆತನ ಬದುಕಿನ ಕೊನೆಯ ಸಂದರ್ಶನ.

  • ನೀವು ಧರಿಸುತ್ತಿದ್ದ ಡ್ರೆಸ್ ವಿನ್ಯಾಸ ಹಾಗೇಕಿರುತ್ತಿತ್ತು ? ಅದು ಹೇಗಾಯಿತು ?
    – ಅದೊಂದು ಅನಿರೀಕ್ಷಿತ ಅರ್ಜೆಂಟಾದ ಸಂದರ್ಭದಲ್ಲಿ ರೂಪು ತಳೆಯಿತು. ನನ್ನ ಮೊದಲ ಸಿನಿಮಾದ ಶೂಟಿಂಗ್ ಶುರುವಾಗುವಾಗ ನಮ್ಮ ಕ್ಯಾಮರಾಮೆನ್ ‘ಸ್ವಲ್ಪ ತಮಾಷೆಯಾಗಿ ಕಾಣುವಂತ ಕಾಸ್ಟೂಂ ಹಾಕಿಕೊ’ ಅಂದಿದ್ದರು. ನಾನು ಬಟ್ಟೆಗಳ ವಿಭಾಗದತ್ತ ಯೋಚಿಸುತ್ತಾ ಹೋದೆ. ಕೊನೆಗೆ ಪ್ರತಿಯೊಂದು ವೈರುಧ್ಯಮಯವಾಗಿರುತ್ತದೆ ಎಂದು ನಿರ್ಧರಿಸಿದೆ. ಹಾಗಾಗಿ ದೊಗಲೆ ಬ್ಯಾಗಿ ಪ್ಯಾಂಟ್, ಬಿಗಿಯಾದ ಕೋಟ್, ದೊಡ್ಡ ತಲೆ, ಚಿಕ್ಕ ಹ್ಯಾಟ್, ಒಟ್ಟಿನಲ್ಲಿ ಚಿಂದಿಯುಟ್ಟ ಜೆಂಟಲ್‌ಮೆನ್.. ಇವೆಲ್ಲಾ ಅವತ್ತಿನ ಟ್ರೆಂಡ್‌ಗೆ ವಿರುದ್ಧವಾಗಿತ್ತು. ಇನ್ನು ಮುಖ… ದುಃಖಿತ, ಗಂಭೀರ ಮುಖಭಾವ ಇರಲಿ ಅಂದುಕೊಂಡಿದ್ದೆ. ಪ್ರೇಕ್ಷಕರಿಗೆ ಹೊರನೋಟಕ್ಕೆ ನನ್ನದು ಹಾಸ್ಯದ ಪಾತ್ರ ಅನಿಸಕೂಡದು ಎಂಬ ಯೋಚನೆ ಇತ್ತು. ಅದೇ ತರ ಒಂದು ಮೀಸೆ ಇರಿಸಿಕೊಂಡೆ, ಆ ಮೀಸೆ ನನ್ನ ಮುಖದ ಭಾವನೆಗಳನ್ನು ಜನರು ನೋಡಲು ಅಡ್ಡಿಯಾಗದಷ್ಟು ಪುಟ್ಟದಾಗಿ ಆದರೆ ತಮಾಷೆಯಾಗಿ ಎದ್ದು ಕಾಣುವಷ್ಟು ದಪ್ಪವಾಗಿ ರೆಡಿ ಮಾಡಿದೆ. ಇವೆಲ್ಲವೂ ಆಗಿನ ಜನಜೀವನ ಶೈಲಿಗೆ ವ್ಯತಿರಿಕ್ತವಾಗಿದ್ದವು. ಹಾಗಾಗಿ ನೋಡಿದ ತಕ್ಷಣ ನೆನಪಿನಲ್ಲಿ ಉಳಿಯುವಂತೆ ಪರಿಣಾಮ ಬೀರಿದವು.
  •  ಈ ವೇಶದಲ್ಲಿ ಮೊದಲ ಬಾರಿಗೆ ನೀವೇ ನೋಡಿಕೊಂಡಾಗ ಹೇಗನಿಸಿತ್ತು ?
    – ಇದು ಕೆಲಸಕ್ಕೆ ಬರುತ್ತೆ ಅನಿಸಿತ್ತು. ಆ ನನ್ನ ವೇಷ ಭೂಷಣಗಳು ತಕ್ಷಣಕ್ಕೆ ಏನು ಅನಿಸದಂತಿದ್ದರೂ ಸಹ ಒಂದು ಸಾರಿ ಕ್ಯಾಮರಾ ಎದಿರು ನಿಂತು ನಟಿಸಲು ಶುರು ಮಾಡಿದ ಮೇಲೆ ಅದರ ಮ್ಯಾಜಿಕ್ ಏನೆಂದು ಎಲ್ಲರಿಗೂ ಗೊತ್ತಾಯಿತು. ಅದಲ್ಲದೆ ನನ್ನವು ಪುಟ್ಟ ಪಾದಗಳಿದ್ದಾಗಲೂ ನನಗೆ ಸ್ಟುಡಿಯೋದಲ್ಲಿ ಸಿಕ್ಕಿದ್ದು ಮಾತ್ರ ದೊಡ್ಡ ಸೈಜಿನ ಶೂಗಳು, ಅವು ನನ್ನನ್ನು ಇನ್ನಷ್ಟು ದಯನೀಯವಾಗಿ, ತಮಾಷೆಯಾಗಿ ಬಿಂಬಿಸಿದವು.
  •  ಆಧುನಿಕ ಕಾಲದಲ್ಲೂ ನಿಮ್ಮ ಈ ಟ್ರಾಂಪ್ ಪಾತ್ರ ಮತ್ತು ಉಡುಗೆ ನಡೆಯುತ್ತದೆ ಅನಿಸುತ್ತದೆಯಾ ?
    – ಈಗ ಆ ಪಾತ್ರಕ್ಕೆ ಮತ್ತು ಸನ್ನಿವೇಶಗಳಿಗೆ ಅವಕಾಶ ಇಲ್ಲ. ಜಗತ್ತು ಈಗ ಇನ್ನಷ್ಟು ವ್ಯವಸ್ಥಿತವಾಗಿರುವಂತೆ ಕಾಣುತ್ತಿದೆ. ಮೇಲಾಗಿ ಚಿಕ್ಕ ಮಕ್ಕಳ ಬಟ್ಟೆಗಳು ಈಗ ನನ್ನದಕ್ಕಿಂತಾ ಕಿರಿದಾಗಿ ಇದೆ. ಅನೇಕರಿಗೆ ಟ್ರ್ಯಾಂಫ್ ಪಾತ್ರದಂತೆ ಇರಬೇಕೆನಿಸಬಹುದು. ಆದರೆ ದೈನ್ಯ ಉಕ್ಕಿಸುವ ಪಾತ್ರವಾಗುಳಿಯಲಾರದು. ಅದೀಗ ಪ್ರಾಚ್ಯ ವಸ್ತು ತರ. ಬೇರೆ ಕಾಲಘಟ್ಟಕ್ಕೆ ಸೇರಿದಂತೆ ಭಾಸವಾಗಬಹುದು. ಹಾಗಾಗಿ ನಾನು ಆ ಪಾತ್ರಗಳಲ್ಲಿ ಮುಂದುವರೆಯಲು ಆಗಲಿಲ್ಲ. ಜೊತೆಗೆ ಟಾಕಿ ಸಿನಿಮಾ ಬಂದ ಮೇಲೆ ಚಾಪ್ಲಿನ್‌ನ ದನಿ ಹೇಗಿರಬೇಕೆಂದು ನಿರ್ಧರಿಸಲು ನನಗೆ ಆಗಲೇ ಇಲ್ಲ. ಹಾಗಾಗಿ ಆ ಪಾತ್ರ ನಿರ್ಗಮಿಸಲೇ ಬೇಕಾಗಿ ಬಂತು.
  • ನಿಮ್ಮ ಟ್ರಾಂಪ್ ಪಾತ್ರದ ಮಹತ್ವ ಏನು ?
    – ಮಹತ್ವ ಎನ್ನುವುದಕ್ಕಿಂತಾ ನಾನು ಬೇರೊಂದು ವಿಷಯ ಹೇಳುತ್ತೇನೆ. ನನ್ನ ಟ್ರಾಂಪ್ ಪಾತ್ರ ನೋಡಿ ಮೆಚ್ಚಿದ ಪ್ರೇಕ್ಷಕರಿಂದ ಉತ್ತೇಜನ ಪಡೆದಿದ್ದೇನೆ ನಿಜ, ಆದರೆ ಆ ನನ್ನ ಪಾತ್ರ ಪ್ರೇಕ್ಷಕರಿಗೆ ಸಂಬಂಧಿಸಿದ್ದಲ್ಲ. ಏಕೆಂದರೆ ಪ್ರೇಕ್ಷಕ ಬರುವುದು ಒಂದು ಸಿನಿಮಾ ರೆಡಿಯಾದ ನಂತರವೇ ವಿನಃ ತಯಾರಾಗುವಾಗ ಅಲ್ಲ. ಆದರೆ ಆ ಪಾತ್ರ ಅಭಿನಯಿಸುವಾಗಲೆ ನಾನೇ ಆ ಪಾತ್ರವಾಗಿರುತ್ತಿದ್ದೆ. ನನ್ನೊಳಗೆ ಒಂದು ವಿಡಂಬನೆ-ಕಿಡಿಗೇಡಿತನದ ಪ್ರೇರಣೆ ಇರುತ್ತಿತ್ತು. ನಾನದನ್ನು ತೋರಿಸಲು ಬಯಸುತ್ತಿದ್ದೆ.
  •  ಜನರನ್ನು ನೋಡಿ ನಿಮ್ಮ ಸಿನಿಮಾದ ಹಾಸ್ಯ ಸನ್ನಿವೇಶಗಳು ಸಿದ್ಧವಾದವೊ ಅಥವಾ ಅವೆಲ್ಲಾ ನಿಮ್ಮ ಕಲ್ಪನೆಗಳೊ ?
    – ಇಲ್ಲ, ಅವೆಲ್ಲಾ ನಮ್ಮದೇ ಆದ ಪ್ರಪಂಚದ ಸೃಷ್ಟಿಗಳು. ಕ್ಯಾಲಿಪೋರ್ನಿಯಾದಲ್ಲಿ ನನ್ನದೊಂದು ಸ್ಟುಡಿಯೋ ಇತ್ತು. ಅಲ್ಲಿ ನಿತ್ಯ ಸಂಜೆ ನಾವು ಅನೇಕರು ಸೇರುತ್ತಿದ್ದೆವು. ಮಾತು, ಹರಟೆಗಳಲ್ಲಿ ನಮ್ಮ ಸಿನಿಮಾ ಜೀವ ತಳೆಯುತ್ತಿತ್ತು. ಅದರಂತೆ ಶೂಟ್ ಮಾಡುತ್ತಿದ್ದೆವು.
  •  ರಿಯಲಿಸಂ ಎನ್ನುವುದು ಕಾಮಿಡಿಯ ಅಂತರ್ಗತ ಭಾಗವೆ ?
    – ಖಂಡಿತಾ… ಒಂದು ಅಸಂಗತ ಸನ್ನಿವೇಶವಿದ್ದಾಗ ನೀವದನ್ನು ವಾಸ್ತವದ ನೆಲೆಯಲ್ಲಿ ಬಿಂಬಿಸಿದರೆ ಜನರಿಗೆ ತಲುಪುತ್ತದೆ. ಏಕೆಂದರೆ ಪ್ರೇಕ್ಷಕರಿಗೆ ಅದಾಗಲೇ ರಿಯಾಲಿಟಿ ತಿಳಿದಿರುತ್ತದೆ ಆದ್ದರಿಂದ.
  •  ನಿಮ್ಮ ಸಿನಿಮಾದ ತಮಾಷೆಗಳೆಲ್ಲಾ ಘಟನೆಗಳನ್ನು ಆಧರಿಸಿರುವಂತವು ? ಅವು ಬೌದ್ಧಿಕವಾಗಿರುವಂತವಲ್ಲ ಏಕೆ ?
    – ಘಟನೆಗಳ ಸರಪಣಿಯೇ ಒಂದು ಕತೆಯನ್ನು ಬೆಳೆಸುತ್ತದೆ. ಅದೊಂದು ರೀತಿಯಲ್ಲಿ ಬಿಲಿಯರ್ಡ್ಸ್ ಟೇಬಲಿನ ಮೇಲಿರುವ ಬಾಲ್‌ಗಳಂತೆ. ಒಂದು ಇನ್ನೊಂದನ್ನು ತಾಕಿ, ದೂಡುತ್ತಾ ಚಲಿಸುತ್ತಾ ಕೊನೆಗೊಮ್ಮೆ ಒಂದು ಟ್ರಯಾಂಗಲ್‌ನಲ್ಲಿ ಮರಳಿ ಸೇರುವ ಹಾಗೆ.. ನನ್ನ ಕೆಲಸಗಳಲ್ಲಿ ನಿಮಗೆ ಇದೇ ಇಮೇಜ್ ಕಾಣುವುದು.
  • ನಿಮ್ಮ ಸಿನಿಮಾಗಳ ಚಲನೆ ಒಂದು ವೇಗದಲ್ಲಿ ರಭಸವಾಗಿ ಸಾಗುತ್ತವೆ. ಘಟನೆಗಳು ಒಂದಾದ ನಂತರ ಇನ್ನೊಂದು ಚುರುಕಾಗಿ ಸೇರಿಸಲ್ಪಟ್ಟಿರುತ್ತವೆ. ಅದು ನಿಮ್ಮ ವೈಶಿಷ್ಟ್ಯನಾ ?
    – ಅದು ನನಗೆ ಗೊತ್ತಿಲ್ಲ. ನಾನು ಇತರ ಕಾಮಿಡಿ ಸಿನಿಮಾ ಕಲಾವಿದರನ್ನು ಗಮನಿಸಿದ್ದೇನೆ. ಅವರು ನಡುವೆ ಕೊಂಚ ವಿರಮಿಸಲು ಬಯಸುವಂತೆ ಕಾಣುತ್ತದೆ. ನಾನು ಒಂದು ಸಿನಿಮಾವನ್ನು ಚುರುಕಾಗಿ ಮುಂದಕ್ಕೆ ಸಾಗಿಸಲು ಯೋಚಿಸುವವನು. ನನಗೆ ಅದೇ ಇಷ್ಟ.
  • ಭಾವುಕರಾಗಿರುವುದು ಇಲ್ಲ ಕ್ಲೀಷೆಯಾಗುವುದು ಇದರಲ್ಲಿ ನಿಮಗೆ ಯಾವುದು ಕಷ್ಟ ?
    – ನಾವು ಇವುಗಳನ್ನು ಅವಾಯ್ಡ್ ಮಾಡಬೇಕು. ನನಗೆ ಯಾವುದೇ ಆಗಲಿ ಕ್ಲೀಷೆಯಾಗುವ ಬಗ್ಗೆ ಆತಂಕವಿಲ್ಲ. ನಾವೆಲ್ಲರೂ ದಿನಕ್ಕೆ ಮೂರೊತ್ತು ಊಟ ತಿಂದು, ಬದುಕಿ ಹೇಗೂ ಸಾಯುತ್ತೇವೆ. ಪ್ರೀತಿಸುತ್ತೇವೆ. ಅದರಿಂದ ಹೊರ ಬರುತ್ತೇವೆ. ಒಂದು ಪ್ರೇಮ ಪ್ರಸಂಗಕ್ಕಿಂತಾ ದೊಡ್ಡ ಕ್ಲೀಷೆ ಇನ್ನೊಂದಿರಲಾರದು. ಯಾವುದು ಏನೇ ಇರಲಿ ಅದನ್ನು ಕುತೂಹಲಕಾರಿಯಾಗಿಸಬೇಕು ಅಷ್ಟೆ.
  •  ಟಾಕಿ ಸಿನಿಮಾ ಬಂದ ಮೇಲೆ ನಿಮ್ಮ ಪಾತ್ರಕ್ಕೆ ಏನೇನಾಯಿತು ?
    – ನಾನಾಗಲೇ ಹೇಳಿದ ಹಾಗೆ ಮಾತಾಡುವಂತಿದಿದ್ದರೆ ಟ್ರಾಂಪ್‌ನ (ಚಾಪ್ಲಿನ್) ದನಿ ಹೇಗಿರುತ್ತಿತ್ತೆಂಬ ಕಲ್ಪನೆ ನನಗೇ ಇರಲಿಲ್ಲ. ಆದರೂ ನಟನಾಗಿ ನಾನದನ್ನು ಬಗೆಹರಿಸಬಹುದಿತ್ತೇನೊ. ದನಿ ಎನ್ನುವುದು ಬಹಳ ಸುಂದರವಾದದ್ದು, ಹೆಚ್ಚು ಪ್ರಕಟಪಡಿಸಿಕೊಳ್ಳುವಂತದ್ದು, ಆದರೆ ನನ್ನ ಚಾಪ್ಲಿನ್ ಪಾತ್ರದ ಪೋಷಣೆ ಹಾಗೆ ಸಾಗಿ ಬಂದಿರಲಿಲ್ಲ.
  •  ನಿಮಗೂ ಇಷ್ಟವಾದ ನಿಮ್ಮ ಸಿನಿಮಾ ?
    – ಬಹುಶಃ ಸಿಟಿ ಲೈಟ್ಸ್, ರಿಯಲ್ ಕಾಮಿಡಿ ಅದು
  •  ಪವರ್‌ಫುಲ್ ಸಿನಿಮಾ ಅದು, ಕಾಮಿಡಿ-ಟ್ರಾಜಿಡಿ ಎರಡೂ ಅದೆಷ್ಟು ಸಮೀಪದವು ಎನ್ನುವುದನ್ನು ಸಿಟಿ ಲೈಟ್ಸ್ ತೋರಿಸಿತು ಅಲ್ಲವಾ ?
    – ಅದು ನನ್ನ ಆಸಕ್ತಿ ಆಗಿರಲಿಲ್ಲ. ನನ್ನೊಳಗಿರುವ ಮನೋನಿಷ್ಟ ಸ್ವಭಾವದ ಎರಡನೇ ಗುಣ ಅದಾಗಿತ್ತು. ನಾವು ಇನ್ನೊಬ್ಬರ ಬಗ್ಗೆ ತಮಾಷೆಯಾಗಿ ನೋಡುವಾಗಲೂ ನಮಗವರ ಬಗ್ಗೆ ಅನುಕಂಪ-ಸಹಾನುಭೂತಿ ಇರಬೇಕು ಅಂದುಕೊಳ್ಳುವವ ನಾನು.
  •  ಟ್ರಾಜಿಡಿಯಿಂದ ನಮಗೆ ಸಿಗುವ ಪರಿಹಾರ ಇದು ಅನಿಸುತ್ತಾ ?
    – ಇಲ್ಲ, ಜೀವನ ಅದೆಲ್ಲದಕ್ಕಿಂತಲೂ ದೊಡ್ಡದು. ಅದ್ಭುತವಾದದ್ದು, ಬದುಕಿನ ಅನುಭವಗಳು ಟ್ರಾಜಿಡಿಯ ಎದುರು ಅನೇಕ ಬಾರಿ ಕಾಮಿಡಿಯ ಕೆಲವಂಶಗಳನ್ನು ಒಳಗೊಂಡು ಅದೇ ರಕ್ಷಣೆಯಾಗುತ್ತವೆ.
  •  ಜೀನಿಯಸ್ ಅಂತ ಒಂದು ಇದೆಯಾ ?
    – ಜೀನಿಯಸ್ ಅಂತಂದರೇನು ನನಗೆ ಗೊತ್ತಿಲ್ಲ. ಪ್ರತಿಯೊಬ್ಬರಿಗೂ ಏನೋ ಒಂದು ಟ್ಯಾಲೆಂಟ್ ಇರುತ್ತದೆ. ಅದನ್ನವರು ಉತ್ತಮವಾಗಿ ಅಭಿವ್ಯಕ್ತಿಸಿದರೆ ಅದೇ ಪ್ರತಿಭೆ ಅನಿಸಿಕೊಳ್ಳುತ್ತದೆ. ಅಂತಹ ಹಲವು ಸಂಗತಿಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲವರನ್ನು ಬಹುಶಃ ಜೀನಿಯಸ್ ಎಂದು…
  •  ಎಂದು…! ?
    – ತಪ್ಪಾಗಿ ಭಾವಿಸಲಾಗುತ್ತದೆ !
  •  ಕನ್ನಡಕ್ಕೆ : ಈಶ
Share.

Leave A Reply