ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಅಮ್ಮನೆದುರು ನಿಂತು ಹೊಟ್ಟೆ ತೋರಿಸ್ತಾರಂತೆ..!

0

ಡಾ.ರಾಜ್‌ಕುಮಾರ್ ಎಂಬ ದೈತ್ಯ ಂತಿeಭೆಯನ್ನು ಪೊರೆಯುತ್ತಾ, ಒಂದು ತುಂಬು ಸಂಸಾರವನ್ನು ಮಾದರಿಯಾಗಿ ನಿರ್ವಹಿಸಿದವರು ಪಾರ್ವತಮ್ಮ ರಾಜ್ ಕುಮಾರ್. ಶಿವಣ್ಣ, ಪುನೀತ್ ಹಾಗೂ ರಾಘವೇಂದ್ರ ರಾಜ್ ಕುಮಾರ್… ಈ ಮೂವರೂ ಹೊರ ಜಗತ್ತಿನಲ್ಲಿ ಏನೇ ಸಾಧಿಸಿದ್ದರೂ ಮನೆಯೊಳಗೆ ಅಮ್ಮನ ತೆಕ್ಕೆಯಲ್ಲಿಯೇ ಮುದ ಕಾಣುತ್ತಾ ಬಂದವರು. ಅಮ್ಮನ ಮಾರ್ಗದರ್ಶನದಲ್ಲಿಯೇ ಬದುಕು ಕಂಡುಕೊಂಡವರು. ತಮ್ಮ ಹಾಗೂ ಮಕ್ಕಳ ಅನುಬಂಧದ ಬಗ್ಗೆ ಈ ಹಿಂದೆ ಪಾರ್ವತಮ್ಮನವರೇ ರಸವತ್ತಾದ ವಿಚಾರಗಳನ್ನು ಬಿಚ್ಚಿಟ್ಟಿದ್ದರು… ತಮ್ಮ ಮಕ್ಕಳ ಬಗ್ಗೆ ಪಾರ್ವತಮ್ಮನವರು ಮನದುಂಬಿ ಆಡಿದ್ದ ಮಾತುಗಳು ನಿಮಗಾಗಿ…

ಈ ಮೂರೂ ಜನ ತಂದೆಗೆ ತಕ್ಕ ಮಕ್ಳು… ಯಜಮಾನ್ರು ಇದ್ದಾಗ ಯಾವಾಗ್ಲೂ ಬಂದು ನೋಡು ನಂಗೆ ಹೊಟ್ಟೇನೇ ಇಲ್ಲ ಅಂತಾ ಪದೇ ಪದೇ ಬಂದು ಹೊಟ್ಟೆ ತೋರಿಸ್ತಿದರು… ಯಾವತ್ತೂ ಅವರು ತೂಕದಲ್ಲಿ ೫೪ ಕೆಜಿಗಿಂತ ಹೆಚ್ಚಿಸಿಕೊಂಡವರೇ ಅಲ್ಲ. ಅವರ ಮಕ್ಳೂ ಅವರ ಥರಾನೇ ಆಡ್ತಾರೆ… ‘ಅಮ್ಮಾ ನೋಡು ನಂಗೆ ಸ್ವಲ್ಪಾನೂ ಹೊಟ್ಟೆನೇ ಬಂದಿಲ್ಲ…’ ಅಂತಾ ಮೂವರೂ ಬಂದು ನನ್ನ ಮುಂದೆ ನಿಲ್ಲುತ್ತಾರೆ…
-ಹೀಗೆ ತಮ್ಮ ಪತಿ ಮತ್ತು ಪತ್ರರ ಬಗ್ಗೆ ಹೇಳಿದ್ದು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್. ಈ ಹಿಂದೆ ಶಿವರಾಜ್‌ಕುಮಾರ್ ಅವರ ನೂರನೇ ಸಿನಿಮಾದ ಪ್ರಯುಕ್ತ ಅವರ ಮನೆಯಲ್ಲೇ ಏರ್ಪಡಿಸಿದ್ದ ‘ಮನದ ಮಾತು ಮನೆ ಊಟ’ದಲ್ಲಿ ಮಾತಾಡುತ್ತಾ ಡಾ. ರಾಜ್ ಮತ್ತು ಅವರ ಮಕ್ಕಳಿಗಿರುವ ಸೌಂದರ್ಯ ಪ್ರಜ್ಞೆಯ ಬಗ್ಗೆ ಮಾತಾಡುತ್ತಿದ್ದರು.
ಶಿವರಾಜ್‌ಕುಮಾರ್, ಪುನೀತ್ ಮತ್ತು ರಾಘಣ್ಣ ಒಂದು ಕಡೆ ಸೇರಿದಾಗಲೂ ಮನೆಯ ವಿಚಾರಗಳನ್ನು ಬಿಟ್ಟು ಸಿನಿಮಾದ ಬಗ್ಗೆಯೇ ಹೆಚ್ಚು ಹರಟುತ್ತಿರುತ್ತಾರಂತೆ.. ‘ನಿನ್ನ ಫಿಟ್‌ನೆಸ್ ಚೆನ್ನಾಗಿದೆ…’, ‘ನಿನ್ನಂಗೇ ಇನ್ನೊಂದು ಸ್ವಲ್ಪ ತೆಳ್ಳಗಾದರೆ ಚೆಂದ’. ‘ನಿನ್ನ ಆ ಸಿನಿಮಾ ಹೀಗಿತ್ತು’… ಹೀಗೆ ಸಿನಿಮಾವೇ ಪ್ರಮುಖ ವಿಷಯವಂತೆ.. ಹೀಗಾಗಿ ಮನೆಯ ಹೆಣ್ಣು ಮಕ್ಕಳು ‘ನಿಮಗೆ ಇದು ಬಿಟ್ಟು ಬೇರೆ ಮಾತೇ ಇಲ್ವಾ’ ಎಂದೂ ಮೂದಲಿಸುತ್ತಾರಂತೆ.
‘ಶಿವಣ್ಣ ನೂರಕ್ಕಿಂತಾ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದರೂ ಅವರು ಪ್ರತಿ ದಿನವೂ ಮೊದಲನೇ ಚಿತ್ರದ ಶೂಟಿಂಗ್‌ಗೆ ಹೋಗುವಂತೆ ಶೂಟಿಂಗಿಗೆ ಹೋಗುತ್ತಾರೆ. ಯಾವತ್ತೂ ಅವರು ಸಿನಿಮಾ ಬಗ್ಗೆ ಬೇಸರ ಮಾಡಿಕೊಂಡಿದ್ದೇ ನಾನು ನೋಡಿಲ್ಲ. ಹೀಗಾಗಿ ಶಿವಣ್ಣನೇ ನನಗೆ ಗಾಡ್‌ಫಾದರ್’ ಎಂದು ಪುನೀತ್ ಹೇಳಿದರೆ, ‘ಅಪ್ಪು ತುಂಬಾ ಸಣ್ಣ ವಯಸ್ಸಿಗೇ ಕ್ಯಾಮೆರಾದ ಮುಂದೆ ನಿಂತುಬಿಟ್ಟಿದ್ದ… ಐದಾರು ವರ್ಷದವನಿದ್ದಾಗಲೇ ‘ಬಾಳದಾರಿಯಲ್ಲಿ’ ಹಾಡು ಹೇಳಿದ್ದ… ಅವನ ಚುರುಕುತನ, ಸಾಧನೆ ನೋಡಿದಾಗಲೆಲ್ಲಾ ನಾನೂ ಸಿನಿಮಾಕ್ಕೆ ಬರಬೇಕು ಅನ್ನಿಸುತ್ತಿತ್ತು… ಹೀಗಾಗಿ ಅಪ್ಪುನೇ ನನ್ನ ಗಾಡ್‌ಫಾದರ್, ಅವನೇ ನನ್ನ ರೋಲ್‌ಮಾಡೆಲ್…’ ಅನ್ನೋದು ಶಿವಣ್ಣನ ನಂಬಿಕೆ.
ಎಲ್ಲರೂ ಹೀಗೆ ಒಬ್ಬರನ್ನೊಬ್ಬರು ಸ್ಫೂರ್ತಿಯಾಗಿಸಿಕೊಂಡಿರುವುದೇ ಈ ಸಿನಿಮಾ ಕುಟುಂಬದ ಸಾಧನೆಯ ಗುಟ್ಟಿರಬಹುದು.

Share.

Leave A Reply