ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಅಜಯ್ ರಾವ್ ಸಂದರ್ಶನ…

0

ಇದುವರೆಗೂ ಲವರ್ ಬಾಯ್ ಇಮೇಜ್‌ನ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವವರು ಅಜೇಯ್ ರಾವ್. ಅವರೀಗ ಧೈರ್ಯಂ ಚಿತ್ರದ ಮೂಲಕ ಮಾಸ್ ಇಮೇಜ್‌ನಲ್ಲಿ ಪ್ರೇಕ್ಷಕರನ್ನು ಎದುರುಗೊಳ್ಳಲು ಅಣಿಯಾಗಿದ್ದಾರೆ. ಈ ಬಗ್ಗೆ ಅಜೇಯ್ ರಾವ್ ಸಿನಿಬಜ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ…

ನಿಮ್ಮ ಮಟ್ಟಿಗೆ ತೀರಾ ಹೊಸಾ ಪ್ರಯೋಗಗಳಿರೋ ಧೈರ್ಯಂ ಚಿತ್ರ ಈ ವಾರ ಬಿಡುಗಡೆಯಾಗ್ತಿದೆ. ಹಳೇ ಇಮೇಜ್ ಬದಲಾಯಿಸಿಕೊಂಡು ಅಭಿಮಾನಿಗಳ ಮುಂದೆ ಹೋಗ್ತಿದ್ದೀರಿ. ಹೇಗನ್ಸುತ್ತೆ?

ನಾನು ತುಂಬಾ ದಿನಗಳಿಂದ ಕಾಯ್ತಿದ್ದ ಪಾತ್ರ ಈ ಚಿತ್ರದಲ್ಲಿ ಸಿಕ್ಕಿರೊದರ ಬಗ್ಗೆ ಖುಷಿಯಿದೆ. ಇಷ್ಟೂ ಕಾಲ ಸ್ಯಾಡ್ ಮೂಡಲ್ಲಿ ಕಣ್ಣೀರ್ ಹಾಕೊಂಡು ಅದೇ ಥರದ ಪಾತ್ರ ಮಾಡಿ ನಂಗೇ ಬೋರಾಗಿತ್ತು. ಪರ್ಸನಲೀ ನಾನು ಮಾಸ್ ಸಿನಿಮಾಗಳನ್ನೇ ನೋಡಿ ಇಷ್ಟಪಟ್ಟು ಬೆಳೆದವನು. ಅಂಥಾದ್ದೇ ಒಂದು ಡೈನಾಮಿಕ್ ಕ್ಯಾರೆಕ್ಟರ್ ನಂಗೂ ಸಿಗಬೇಕು ಅಂತ ನಿಜಕ್ಕು ಆಸೆಯಿತ್ತು. ಆದ್ರೆ ಒಂದು ಬಗೆಯ ಪಾತ್ರದಲ್ಲಿ ಕ್ಲಿಕ್ ಆಗಿದ್ರಿಂದ ಕಥೆ ಮಾಡುವವರು, ನಿರ್ಮಾಪಕರು ಮತ್ತೆ ಅದೇ ಪಾತ್ರಗಳಲ್ಲಿ ನಟಿಸುವಂಥಾ ಸಂದರ್ಭ ಸೃಷ್ಟಿಸಿದ್ರು. ಆದ್ರೆ ಸ್ಯಾಡ್ ಮೂಡ್, ಖುಷಿ ಎಲ್ಲದರಲ್ಲಿಯೂ ಪ್ರೇಕ್ಷಕರು ನನ್ನನ್ನು ಅವರದ್ದೇ ಪ್ರತಿನಿಧಿಯಂತೆ ಒಪ್ಪಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಿಮ್ಮದು ಪಕ್ಕಾ ಡೈನಾಮಿಕ್ ಪಾತ್ರಾನಾ?

ನಾನು ಮೊದಲೇ ಹೇಳಿದಂತೆ, ಈ ವರೆಗೆ ಮಾಡಿಕೊಂಡು ಬಂದ ಪಾತ್ರಗಳ ಜೊತೆ ಪ್ರೇಕ್ಷಕರು ಕನೆಕ್ಟಾಗಿದ್ದಾರೆ. ಇಷ್ಟೂ ವರ್ಷಗಳ ಪರಿಶ್ರಮದಿಂದ ಒಂದು ಇಮೇಜ್ ಅನ್ನ ಸಂಪಾದಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಹಳೇ ಇಮೇಜ್ ಬಿಟ್ಟು ಕೊಡದೇನೇ ಡೈನಾಮಿಕ್ ಇಮೇಜನ್ನೂ ಅಪ್ಪಿಕೊಳ್ಳುವಂಥಾ ಸಹಜ ಕಥೆ ಇದೆ. ಸ್ವಭಾವತಃ ಮೃದು ಸ್ವಭಾವದ ವ್ಯಕ್ತಿ ಕೂಡಾ ಬಂದೊದಗುವ ಸಂಕಷ್ಟಗಳ ವಿರುದ್ಧ ಹೇಗೆ ರೆಬೆಲ್ ಆಗಬಲ್ಲ ಎಂಬುದನ್ನು ನನ್ನ ಪಾತ್ರ ಧ್ವನಿಸುತ್ತದೆ. ಈ ಚಿತ್ರ ನೋಡೋ ಕಾಮನ್ ಆಡಿಯನ್ಸ್ ಕೂಡಾ ಸಂದರ್ಭ ಬಂದರೆ ತಾವೂ ಹೀಗೆಯೇ ರೆಬೆಲ್ ಆಗಬಲ್ಲೆವು ಎಂಬಂಥ ಫೀಲ್ ಹುಟ್ಟಿಸೋವಂಥಾ ಪಾತ್ರ ನನ್ನದು.

ರವಿಶಂಕರ್ ಅವ್ರ ಮುಂದೆ ಎಂಥಾ ಹೀರೋಗಳೂ ನಿಲ್ಲೋದು ಕಷ್ಟ ಎಂಬಂಥಾ ಮಾತಿದೆ. ಅವರೆದುರೇ ನಟಿಸಿದ್ದೀರಿ. ಆ ಅನುಭವ ಹೇಗಿತ್ತು?

ನನಗೂ ಕೂಡಾ ಈ ಬಗ್ಗೆ ಒಂದು ಭಯ ಇತ್ತು. ಆದರೆ ನನ್ನ ಮತ್ತು ರವಿಶಂಕರ್ ಅವರ ಕಂಬಿನೇಷನ್ ನಿಜಕ್ಕೂ ಮಜವಾಗಿ ಮೂಡಿಬಂದಿದೆ. ಅದನ್ನು ಸಿನಿಮಾದಲ್ಲೇ ನೋಡಿದರೆ ಚೆನ್ನ. ಆದರೆ ರವಿಶಂಕರ್ ಅವರ ಸ್ನೇಹಶೀಲ ವ್ಯಕ್ತಿತ್ವದ ಬಗ್ಗೆ ಹೇಳಲೇಬೇಕು. ಅಷ್ಟು ದೊಡ್ಡ ಹೆಸರು ಮಾಡಿದರೂ ಅವರದ್ದು ಮೃದು ಸ್ವಭಾವ. ತಾನು ಮಾತ್ರವಲ್ಲ ತನ್ನೆದುರು ನಿಂತಿರೋ ಕಲಾವಿದನೂ ಬೆಳೆಯಬೇಕೆಂಬ ಅವರ ಪ್ರಾಮಾಣಿಕ ಮನಸ್ಥಿತಿ ನಂಗಿಷ್ಟ ಆಯ್ತು. ಅವರೊಂದಿಗಿನ ನಟನೆ ಯಾವತ್ತಿಗೂ ಮರೆಯಲಾಗದ್ದು.

ಸದ್ಯ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವವರು ನೀವು. ಧೈರ್ಯಂ ಚಿತ್ರದಲ್ಲಿ ಬದಲಾದ ಇಮೇಜನ್ನ ಅವರು ರಿಸೀವ್ ಮಾಡಿಕೊಳ್ತಾರಾ?

ನಂಗೆ ಸ್ಕೂಲ್ ಡೇಸಿಂದನೂ ಹುಡುಗೀರು ಫ್ರೆಂಡ್ಸಿದಾರೆ. ಇನ್ನು ಎಕ್ಸ್‌ಕ್ಯೂಸ್‌ಮಿ ಚಿತ್ರದ ಕಾಲದಲ್ಲಿ ನನ್ನನ್ನು ಮೆಚ್ಚುಕೊಂಡಿದ್ದ ಹೆಣ್ಣುಮಕ್ಕಳೆಲ್ಲಾ ಈಗ ಮದುವೆಯಾಗಿ ಸೆಟಲ್ ಆಗಿರಬಹುದು. ಇವರೆಲ್ಲರೂ ಒಂದು ಹಂತದವರೆಗೆ ಮಾತ್ರ ರೊಮ್ಯಾಂಟಿಕ್ ಹೀರೋಯಿಸಮ್ ಇಷ್ಟ ಪಡ್ತಾರೆ. ಆ ನಂತರ ಕಷ್ಟ ಬಂದಾಗ ರೆಬೆಲ್ ಆಗುವಂಥಾ ಕ್ಯಾರೆಕ್ಟರ್ ಅನ್ನೂ ನಿರೀಕ್ಷೆ ಮಾಡ್ತಾರೆ. ಎಷ್ಟೋ ಮಹಿಳಾ ಅಭಿಮಾನಿಗಳು ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳುವಂತೆ ಬೇಡಿಕೆಯನ್ನೂ ಇಟ್ಟಿದ್ದಿದೆ. ಅದಲ್ಲದೆ ಈ ಚಿತ್ರದಲ್ಲಿ ಎರಡೂ ಬಗೆಯ ಇಮೇಜ್‌ಗಳೂ ಮಿಳಿತವಾಗಿವೆ. ಎಲ್ಲ ಚಿತ್ರರಂಗದಲ್ಲಿಯೂ ಯೂನಿವರ್ಸಲ್ ಪಾತ್ರ ಮಾಡಿದವರು ಮಾತ್ರವೇ ಹೀರೋಗಳಾಗಿ ನೆಲೆ ನಿಂತಿದ್ದಾರೆ. ನನಗೂ ಅಂಥಾದ್ದೊಂದು ಭರವಸೆ ಇದೆ.

ಶಿವತೇಜಸ್ ಅವರು ಅಸೋಸಿಯೇಟ್ ಆಗಿದ್ದ ಚಿತ್ರಗಳಲ್ಲಿ ನೀವು ನಟಿಸಿದ್ರಿ. ಇದೀಗ ನಿರ್ದೇಶಕರಾಗಿ ಅವರ ಜೊತೆ ಕೆಲಸ ಮಾಡಿದ ಬಗ್ಗೆ ಏನನ್ಸುತ್ತೆ?

ನಮ್ಮಿಬ್ಬರದ್ದು ಹಳೇ ಪರಿಚಯ. ಕೆಲ ಚಿತ್ರಗಳ ಚಿತ್ರೀಕರಣದ ಸಂದರ್ಭದಲ್ಲಿ ಅವರ ಜೊತೆ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೇನೆ. ಆಗಿನಿಂದಲೂ ಅವರ ಚುರುಕುತನ ಮತ್ತು ಪ್ರತಿಭೆಯನ್ನು ನೋಡಿಕೊಂಡೇ ಬಂದಿದ್ದೇನೆ. ಹೀಗೆ ಬಹು ಕಾಲದ ಒಡನಾಟ ಇರೋದರಿಂದ ಈ ಚಿತ್ರದಲ್ಲಿ ಯಾವುದೇ ಅಂಜಿಕೆ ಇಲ್ಲದೆ ಚರ್ಚೆ ನಡೆಸಿದ್ವಿ. ಆದ್ದರಿಂದಾನೆ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಇನ್ನು ನಿರ್ಮಾಪಕ ರಾಜು ಅವರು ಶಿವತೇಜಸ್ ಅವರ ಸ್ನೇಹಿತರು. ಅವರು ಮಿತ ಭಾಷಿ. ಬೇರೆ ವೃತ್ತಿಯಲ್ಲಿ ವೈಧ್ಯರಾಗಿದ್ದರೂ ಅವರ ಸಿನಿಮಾ ಪ್ರೀತಿ ಕಂಡು ಅಚ್ಚರಿಗೊಂಡಿದ್ದೇನೆ. ಯಾವುದಕ್ಕೂ ಕೊರತೆಯಾಗದಂತೆ ಇಡೀ ಚಿತ್ರವನ್ನು ರೂಪಿಸಿದ್ದ ಅವರ ಬಗ್ಗೆ ನಿಜಕ್ಕೂ ಹೆಮ್ಮೆಯಿದೆ.

ಈ ಹಿಂದೆ ರಿಲೀಸಾಗಿದ್ದ ಧೈರ್ಯಂ ಚಿತ್ರದ ಟ್ರೈಲರ್ ಹಿಟ್ ಆಗಿದೆ. ಇಡೀ ಚಿತ್ರ ಅಷ್ಟೇ ಚೆನ್ನಾಗಿರೋದರಿಂದ ಜನ ಒಪ್ಪಿಕೊಳ್ಳುತ್ತಾರೆಂಬ ಭರವಸೆ ಇದೆ…

 

Share.

Leave A Reply