ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಹೀರೋ ಅರು ಗೌಡ ಮೇಲೆ ಅಪಪ್ರಚಾರ!

0

ಇದು ದೃಷ್ಯ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಹಸಿವಿಗೆ ರೀಸೆಂಟಾದ ಬಲಿ ಉದಯೋನ್ಮುಖ ನಟ ಅರು ಗೌಡರದ್ದು. ಸಾಮಾನ್ಯವಾದ ಒಂದು ಸುದ್ದಿಯನ್ನಿಟ್ಟುಕೊಂಡು ಉಜ್ಜಾಡಲಾರಂಭಿಸಿದ್ದ ಛಾನೆಲ್‌ಗಳು ಅಕ್ರಮ ಹುಕ್ಕಾ ಬಾರ್ ಮಾಲೀಕ ಅರು ಗೌಡರನ್ನು ಪೊಲೀಸರು ಎತ್ತಾಕಿಕೊಂಡು ಹೋಗಿ ರುಬ್ಬುತ್ತಿದ್ದಾರೆ ಎಂಬ ರೇಂಜಿನಲ್ಲಿ ಸುದ್ದಿ ಮಾಡಿದ್ದವು. ಆದರೆ ಕೆಲವು ಚಾನೆಲ್ಲಗಳು ಹೀಗೆ ಒದರುತ್ತಿದ್ದ ಸಂದರ್ಭದಲ್ಲಿ ಅರು ಗೌಡ ವಸುದೈವ ಕುಟುಂಬಕಂ ಎಂಬ ಚಿತ್ರದ ಶೂಟಿಂಗಲ್ಲಿ ಬ್ಯುಸಿಯಾಗಿದ್ದರು!

ಮೊನ್ನೆ ದಿನ ಹಠಾತ್ತನೆ ಹರಡಿಕೊಂಡಿದ್ದದ್ದು ಅರು ಗೌಡ ಬಂಧನದ ಸುದ್ದಿ. ಆದರೆ, ಇದರ ಹಿಂದಿನ ಅಸಲೀ ಕಥೆಯೇ ಬೇರೆಯದ್ದಿದೆ. ಅರು ಗೌಡ ಬೆಂಗಳೂರಿನ ಚಂದ್ರಾ ಲೇಔಟಿನಲ್ಲಿ ಸ್ನೇಹಿತರ ಪಾರ್ಟ್ನರ್ ಶಿಪ್ ನಲ್ಲಿ `ಚಾರ್ ಕೋಲ್ ಕೆಫೆ’ ಎಂಬ ಬಿಯರ್ ಬಾರ್ ನಡೆಸುತ್ತಿರೋದು ನಿಜ. ಇದನ್ನು ಅರು ಗೌಡ ತನ್ನ ಸ್ನೇಹಿತರ ಜೊತೆ ಪಾಲುದಾರಿಕೆಯಲ್ಲಿ ಮಾಡಿದ್ದು ಈಗ್ಗೆ ಎರಡು ವರ್ಷಗಳ ಹಿಂದೆ. ಇದಕ್ಕೆ ಯಾವ್ಯಾವ ಕಾನೂನಾತ್ಮಕ ಕಟ್ಟಳೆಗಳಿದ್ದಾವೋ ಅದೆಲ್ಲದರ ಮೂಲಕವೇ ಇದನ್ನು ಶುರು ಮಾಡಲಾಗಿತ್ತು. ಅಲ್ಲಿಂದೀಚೆಗೆ ಈ ಬಾರ್ ಯಾವುದೇ ರಗಳೆ ರಾಮಾಯಣಗಳಿಲ್ಲದೇ ಮುಂದುವರೆಯುತ್ತಿತ್ತು. ಆದರೆ, ಮೊನ್ನೆ ದಿನ ಸಿಸಿಬಿಯವರು ಏಕಾಏಕಿ ಬಂದು ಪರಿಶೀಲನೆ ನಡೆಸಿದ್ದರು. ಸಾಮಾನ್ಯವಾಗಿ ಇಂಥಾ ಬಾರುಗಳಲ್ಲಿ ಯಾವುದೇ ಆಹಾರ ಪದಾರ್ಥ ಮಾರಬಾರದೆಂಬ ನಿಯಮವಿದೆ. ಅದರೆ ಆವತ್ತಿನ ದಿನ ಯಾರೋ ಸ್ಮೋಕಿಂಗ್ ಝೊನಿನಲ್ಲಿಯೇ ಆಹಾರ ತರಿಸಿಕೊಂಡು ತಿನ್ನುತ್ತಿದ್ದರು. ಹೀಗೆ ನಿಯಮ ಉಲ್ಲಂಘನೆಯಾದ ಪರಿಣಾಮವಾಗಿ ಈ ಬಾರ್ ಮಾಲೀಕರ ಮೇಲೊಂದು ಪಿಟಿ ಕೇಸು ದಾಖಲಾಗಿತ್ತಷ್ಟೇ.
ಈ ಘಟನೆ ಯಾಕಿಷ್ಟು ಜಟಿಲವಾಗಿ ಮಾಧ್ಯಮಗಳಲ್ಲಿ ಬಿಂಬಿತವಾಗಿದೆ ಅಂತ ಹುಡುಕ ಹೋದರೆ ಕೆಲ ಸುಕ್ಷ್ಮಗಳು ಹೊರ ಬಿಳುತ್ತವೆ. ಈಗ್ಗೆ ಒಂದಷ್ಟು ದಿನಗಳಿಂದ ಸಿಸಿಬಿ ಪೊಲೀಸರು ಬೆಂಗಳೂರಿನ ತುಂಬಾ ಕಾರ್ಯಾಚರಣೆ ನಡೆಸುತ್ತಾ ಅಕ್ರಮ ಹುಕ್ಕಾ ಬಾರುಗಳಿಗೆ ಬಾಗಿಲು ಜಡಿಯೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಎಂಜಿ ರೋಡು ಸೇರಿದಂತೆ ನಾನಾ ಕಡೆಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಇಂಥವುಗಳಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳು ಅನಾಯಾಸವಾಗಿ ಯುವ ಸಮುದಾಯದ ಕೈಗೆ ಸಿಗುತ್ತಿದೆ. ಆದ್ದರಿಂದಲೇ ಸಿಸಿಬಿ ಪೊಲೀಸರು ಇಂಥವುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಂಥಾ ಸುದ್ದಿಗಳನ್ನು ಹೊಡೆಯುತ್ತಾ ದೃಷ್ಯ ಮಾಧ್ಯಮಗಳು ಅದೇ ಹ್ಯಾಂಗೋವರಿನಲ್ಲಿದ್ದವಲ್ಲಾ? ಆಗ ಸಿಕ್ಕಿದ್ದು ಅರು ಗೌಡರ ಬಾರಿನ ಸುದ್ದಿ. ಯಾವಾಗ ಈ ಬಾರಿನ ಮಾಲೀಕರಲ್ಲಿ ಹೀರೋ ಅರು ಗೌಡ ಕೂಡಾ ಸೇರಿದ್ದಾರೆಂದು ಗೊತ್ತಾಯಿತೋ ಆಗ ಹಿಂದೆ ಮುಂದೆ ನೋಡದೇ ಸುಳ್ಳು ಸುದ್ದಿ ಹರಿದಾಡಲಾರಂಭಿಸಿತ್ತು. ಜೊತೆಗೆ ಕೇವಲ ಬಿಯರ್ ಬಾರ್ ಆದ ಇದನ್ನು ಹುಕ್ಕಾ ಬಾರ್ ಎಂದೂ ಬಿಂಬಿಸೋ ಕೆಲಸ ನಡೆಯಿತು. ಇದನ್ನು ಕಂಡು ವಸುದೈವ ಕುಟುಂಬಕಂ ಚಿತ್ರದ ಶೂಟಿಂಗಿನಲ್ಲಿದ್ದ ಅರು ಗೌಡ ಓಡಿ ಬಂದು ಸ್ಪಷ್ಟೀಕರಣ ನೀಡುವ ಹೊತ್ತಿಗೆಲ್ಲ ಎಷ್ಟು ಬೇಕೋ ಅಷ್ಟು ಅಪಪ್ರಚಾರ ನಡೆದು ಹೋಗಿತ್ತು!
ಅಷ್ಟಕ್ಕೂ ಈ ಬಿಯರ್ ಬಾರ್ ಚಂದ್ರ ಲೇಔಟ್ ಪೊಲೀಸ್ ಠಾಣೆಯಿಂದ ಕೇವಲ ಐವತ್ತು ಮೀಟರು ದೂರದಲ್ಲಿದೆ. ಇದರ ಕಟ್ಟಡ ಹತ್ತಿ ನಿಂತರೆ ಸಲೀಸಾಗಿ ಪೊಲೀಸ್ ಠಾಣೆಯೇ ಕಾಣಿಸುತ್ತದೆ. ಹೀಗಿರೋವಾಗ ಅಲ್ಲಿ ಅಕ್ರಮ ಚಟುವಟಿಕೆ ನಡೆಸಲು ಹೇಗೆ ಸಾಧ್ಯ ಎಂಬುದು ಅರು ಗೌಡ ಪ್ರಶ್ನೆ.ಅಲ್ಲಿಗೆ ಇಡೀ ಪ್ರಕರಣ ಸಮಾಪ್ತಿಯಾಗಿದೆ. ಆದರೆ, ಅದಾಗಲೇ ಕೆಲವು ದೃಷ್ಯ ಮಾಧ್ಯಮಗಳು ಅರು ಗೌಡ ಜೈಲಲ್ಲಿದ್ದಾರೆ ಎಂಬಂತೆ ಬಿಂಬಿಸಿಯಾಗಿತ್ತು.
ಹೀಗೆ ಹಠಾತ್ತನೆ ಸುದ್ದಿಗೆ ಗ್ರಾಸವಾಗಿದ್ದ ಅರು ಗೌಡ ಇದೀಗ ತಾನೇ ನಾಯಕ ನಟನಾಗಿ ನೆಲೆ ನಿಲ್ಲುತ್ತಿರುವ ಪ್ರತಿಭೆ. ಹಾಸನ ಮೂಲದ ಅರುಣ್ ಈ ಹಿಂದೆ ಪ್ಯಾಟೆ ಮಂದಿ ಕಾಡಿಗ್ ಹೋದ್ರು ಎಂಬ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದಿದ್ದವರು. ಈ ಶೋನ ನಂತರ ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದ ಅರು ಗೌಡ ಮೊದಲ ಸಲ ನಾಯಕ ನಟನಾಗಿ ಹೊರ ಹೊಮ್ಮಿದ್ದ ಚಿತ್ರ ಮುದ್ದು ಮನಸೇ. ಇದಿಗ ನಾನೂ ನಮ್ ಹುಡ್ಗಿ, ವಸುದೈವ ಕುಟುಂಬಕಂ ಮುಂತಾದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂಥಾ ಅರು ಗೌಡ ಈ ವರೆಗೆ ಚಿತ್ರರಂಗದಲ್ಲಿ ಯಾವುದೇ ಲಫಡಾ ಮಾಡಿಕೊಂಡಿಲ್ಲ. ಇವರ ಬಗ್ಗೆ ನೆಗೆಟಿವ್ ಟಾಕ್‌ಗಳೂ ಇಲ್ಲ.
ಇಂಥಾ ಅರು ಗೌಡ ಒಂದು ಸಣ್ಣ ಘಟನೆಯಿಂದ ವಿಲನ್ ಎಂಬಂತೆ ಬಿಂಬಿಸಲ್ಪಟ್ಟಿದ್ದು ಮಾತ್ರ ದೃಷ್ಯ ಮಾಧ್ಯಮಗಳ ಸುದ್ದಿ ಹೆಕ್ಕುವ ಅವಸರದಿಂದಾಗೋ ಅನಾಹುತಗಳಿಗೆ ಸಾಕ್ಷಿಯಾಗಿ ನಿಂತಿದೆ!

Share.

Leave A Reply