ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ರಾಗಿಣಿಗೆ ದಮ್ಮಯ್ಯ ಅಂದ್ರು ದಾಡಿ ಮಹೇಶ್!

0


ಕೆಲ ನಟೀಮಣಿಯರು ಒಂದು ಸಿನಿಮಾ ಪೂರ್ತಿಯಾಗೋವಷ್ಟರಲ್ಲಿ ನಸೀಬುಗೇಡಿ ನಿರ್ದೇಶಕರನ್ನು, ಒಂದಿಡೀ ತಂಡವನ್ನು ಹೇಗೆಲ್ಲಾ ಕಾಡುತ್ತಾರೆಂಬುದಕ್ಕೆ ದಂಡಿ ದಂಡಿ ದೃಷ್ಟಾಂತಗಳು ಸಿಗುತ್ತವೆ. ಸಣ್ಣ ಸಣ್ಣ ಕಾರಣಕ್ಕೂ ತಗಾದೆ, ಕಾರಣವೇ ಇಲ್ಲದ ಮುನಿಸು ಮತ್ತು ತಿಮಿರಿನ ದೌಲತ್ತು… ಇಂಥಾ ನಾನಾ ಶೇಡಿನ ವರಸೆಗಳ ಮೂಲಕ ನರಕ ತೋರಿಸೋ ನಟಿಯರದ್ದೊಂದು ದಂಡೇ ಇದೆ. ಈಗ ಹೇಳ ಹೊರಟಿರೋದು ನಟಿ ರಾಗಿಣಿ ‘ಜಿಂದಾ ಚಿತ್ರದ ಆಡಿಯೋ ರಿಲೀಸ್ ಪ್ರೋಗ್ರಾಮಲ್ಲಿ ಮಾಡಿಕೊಂಡ ಒಂದು ರಂಖಲಿನ ಬಗ್ಗೆ!
ವಿ ನಾಗೇಂದ್ರ ಪ್ರಸಾದ್ ಅವರ ಮ್ಯೂಸಿಕ್ ಬಜಾರ್ ಆಡಿಯೋ ಕಂಪೆನಿ ಮೂಲಕ ಹೊರ ಬಂದ ಜಿಂದಾ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿಯೇ ನಡೆದಿತ್ತು. ಇದು ಶುರುವಾದದ್ದು ಸರಿಸುಮಾರು ಏಳು ಘಂಟೆಯ ಹೊತ್ತಿಗೆ. ಕಿಚ್ಚ ಸುದೀಪ್ ಸೇರಿದಂತೆ ಸಕಲರೂ ಹೇಳಿದ ಸಮಯಕ್ಕೆ ಸರಿಯಾಗಿ ಬಂದು ವೇದಿಕೆಯಲ್ಲಿ ಹಾಜರಾಗಿದ್ದರು. ಆದರೆ, ಇಡೀ ಕಾರ್ಯಕ್ರಮವೇ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದರೂ ರಾಗಿಣಿ ಮೇಡಮ್ಮು ಬಂದಿರಲಿಲ್ಲ!
ಕಾರ್ಯಕ್ರಮದುದ್ದಕ್ಕೂ ಆ ಹೊಟೆಲ್ಲಿನ ಮುಖ್ಯದ್ವಾರದತ್ತ ಗೋಣು ಚಾಚಿಕೊಂಡು ಬೆವರೊರೆಸಿಕೊಳ್ಳಲು ಕತ್ತು ಹುಡುಕುತ್ತಾ, ಏನಕ್ಕೋ ಕಾದು ಸುಸ್ತಾದ ನಿರ್ದೇಶಕ ಮುಸ್ಸಂಜೆ ಮಹೇಶ್ ಬಳಿಕ ಎಂಟ್ರೆನ್ಸಿನಲ್ಲಿಯೇ ಠಿಕಾಣಿ ಹೂಡಿದ್ದರು. ಅಂತೂ ಇಂತೂ ರಾಗಿಣಿ ಎಂಬೋ ಆರಡಿಯ ರಥ ಎಂಟ್ರಿ ಕೊಟ್ಟಿದ್ದು ಎಂಟು ಘಂಗೆಯ ಹೊತ್ತಿಗೆ. ಹಾಗೆ ಬಂದ ರಾಗಿಣಿ ನಿರ್ದೆಶಕ ಮಹೇಶ್ ಮುಂದೆ ನಿಂತವರೇ ಸಾಕ್ಷಾತ್ತು ರಣಚಂಡಿಯಂತೆ ಅಬ್ಬರಿಸಿದ್ದಾರೆ. ‘ನಾ ಬರ‍್ತೀನಂತ ಗೊತ್ತಿದ್ರೂ ಪ್ರೋಗ್ರಾಂ ಸ್ಟಾರ್ಟ್ ಮಾಡಿದೀರಲ್ರೀ, ನಾ ಹೊರಡ್ತೀನಿ ಅಂತ ಧುಮುಗುಡುತ್ತಾ ಹೊರಡಲನುವಾಗಿದ್ದಾರೆ. ಲೇಟಾಗಿ ಬಂದ ರಥ ಯೂ ಟರ್ನ್ ಹೊಡೆಯುತ್ತಲೇ ಥಂಡಾ ಹೊಡೆದ ಮಹೇಶ್ ದಮ್ಮಯ್ಯ ಅನ್ನೋ ರೇಂಜಿಗೆ ಮನವೊಲಿಸಿ ಅಂತೂ ರಾಗಿಣಿಯನ್ನು ಸ್ಟೇಜಿಗೆ ಕರೆ ತಂದಿದ್ದಾರೆ!
ಹೊಟೆಲ್ಲಿನ ದ್ವಾರದಲ್ಲೇ ಇಂಥಾದ್ದೊಂದು ರೌದ್ರಾವತಾರ ತಾಳಿದ್ದ ರಾಗಿಣಿ ವೇದಿಕೆಯಲ್ಲಿ ಏನೂ ಆಗೇ ಇಲ್ಲ ಎಂಬಂತೆ ಮಾತಾಡಿದ್ದಾರೆ. ಕಿಚ್ಚಾ ಸುದೀಪ್‌ರನ್ನು ಹೀನಾಮಾನ ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಆದರೆ ಕಿಚ್ಚಾ ಮೀಸೆಯ ಮರೆಯಲ್ಲಿಯೇ ವಿಕಟ ನಗೆ ನಕ್ಕು ಸುಮ್ಮನಾಗಿದ್ದಾರೆ!
ಇಲ್ಲಿ ಗಮನಿಸಲೇ ಬೇಕಾದ ಅಂಶ ರಾಗಿಣಿಯ ದೌಲತ್ತಿನದ್ದು. ಸುದೀಪ್‌ರಂಥ ಸ್ಟಾರ್‌ಗಳೇ ಹೇಳಿದ ಸಮಯಕ್ಕೆ ಸರಿಯಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಈ ರಾಗಿಣಿ ಬಂದಿದ್ದು ಭರ್ತಿ ಒಂದು ಘಂಟೆ ತಡವಾಗಿ. ಇವರೊಬ್ಬರಿಗಾಗಿ ಸುದೀಪ್ ಸೇರಿದಂತೆ ನೆರೆದಿದ್ದ ಗಣ್ಯರನ್ನು ಒಂದು ಘಂಟೆ ಕಾರ್ಯಕ್ರಮ ಶುರು ಮಾಡದೆ ಕಾಯಿಸಬೇಕಿತ್ತಾ? ಮಾಡೋ ಕೆಲಸ ಬಿಟ್ಟು ರಾಗಿಣಿಯಂಥವರಿಗೆ ಕಾಯಲು ಮಾಧ್ಯಮ ಪ್ರತಿನಿಧಿಗಳಿಗೇನು ಬೇರೆ ಕ್ಯಾಮೆ ಇಲ್ಲವಾ? ಅಷ್ಟು ಬ್ಯುಸಿ ಇದ್ದರೆ ರಾಗಿಣಿ ಇಂಥಾ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವ ದರ್ದೇನಿದೆ?
ತಾನೇನೋ ಸ್ಟಾರ್ ನಟಿ, ತಾನು ಎಷ್ಟು ತಡವಾಗಿ ಹೋದರೂ ಕಾರ್ಯಕ್ರಮ ಶುರು ಮಾಡದೇ ನೊಣ ಹೊಡೆದುಕೊಂಡಿರಬೇಕು ಎಂಬಂಥಾ ಪೊಗರು ರಾಗಿಣಿಯೂ ಸೇರಿದಂತೆ ಯಾವ ನಟ ನಟಿಯರಿಗೂ ತರವಲ್ಲ. ಇದನ್ನು ಇಂಥವರೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ.

Share.

Leave A Reply