ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಯಾಕಿಂತಾ ಕಳಪೆ ವಿನ್ಯಾಸ ಮಾಡಿದ್ದಾರೆ?

0

ದರ್ಶನ್ ಅವರ ಐವತ್ತನೇ ಚಿತ್ರವೆಂಬುದೂ ಸೇರಿದಂತೆ ನಾನಾ ಕಾರಣಗಳಿಂದ ಕುತೂಹಲ ಹುಟ್ಟಿಸಿರೋ ಕುರುಕ್ಷೇತ್ರ ಚಿತ್ರದ ಮುಹೂರ್ತಕ್ಕೆ ನಾಳೆ ದಿನ ನಿಗಧಿಯಾಗಿದೆ. ಈ ಸಮಾರಂಭದ ಆಹ್ವಾನದ ನಿಮಿತ್ತವಾಗಿ ಪೋಸ್ಟರ್ ಕೂಡಾ ಮೊದಲ ಬಾರಿಗೆ ಹೊರ ಬಂದಿದೆ. ಆದರೆ ಈ ಫಸ್ಟ್ ಲುಕ್ ಕಂಡು ಬೇರೆಯವರಿರಲಿ, ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೂ ಕೂಡಾ ಒಳಗೊಳಗೇ ಅಸಹನೆಗೀಡಾಗಿದ್ದಾರೆ!
ನಿರ್ಮಾಪಕ ಮುನಿರತ್ನರ ಸ್ಪೀಡು ನೋಡಿದವರು ಸಹಜವಾಗಿಯೇ ಈ ಚಿತ್ರದ ಪ್ರತಿಯೊಂದು ಕದಲಿಕೆಗಳ ಬಗೆಗೂ ನಿರೀಕ್ಷೆ ಇಟ್ಟುಕೊಂಡಿದ್ದದ್ದು ಸುಳ್ಳಲ್ಲ. ದರ್ಶನ್ ಅಭಿಮಾನಿಗಳಂತೂ ಈ ಬಗ್ಗೆ ಹುಚ್ಚೆದ್ದು ಕಾಯುತ್ತಿರೋದಂತೂ ಸುಳ್ಳಲ್ಲ. ಆದರೆ ಇದೀಗ ಹೊರ ಬಂದಿರೋ ವಿನ್ಯಾಸಗಳು ಅದೆಲ್ಲದರ ಮೇಲೆ ತಣ್ಣೀರೆರಚಿದಂತಿದೆ.
ಈ ಪೋಸ್ಟರುಗಳು ಓಬಿರಾಯನ ಕಾಲದ ಎಂಜಿಆರ್ ನಟನೆಯ ಪೌರಾಣಿಕ ಚಿತ್ರಗಳ ಪೋಸ್ಟರುಗಳಂತೆಯೇ ಇದೆ ಎಂಬ ಕುಹಕ ಎಲ್ಲೆಡೆ ಕೇಳಿ ಬರುತ್ತಿದೆ. ಅಭಿಮಾನಿಗಳು ದರ್ಶನ್ ಮೇಲಿನ ಪ್ರೀತಿಗಾಗಿ ಈ ಬಗ್ಗೆ ಓಪನ್ನಾಗಿ ಅಸಹನೆ ತೋರಿಸಿಕೊಂಡಿಲ್ಲವಷ್ಟೇ. ಆದರೆ ಅತೃಪ್ತಿಯಂತೂ ಇದ್ದೇ ಇದೆ.
ದರ್ಶನ್ ಕೂಡಾ ಈ ಚಿತ್ರಕ್ಕಾಗಿ ಉತ್ಸಾಹದಿಂದ ಭಾರೀ ತಯಾರಿ ಮಾಡಿಕೊಂಡಿದ್ದಾರೆ. ಆದರೆ ತುಸು ಓವರ್ ಕಾನ್ಫಿಡೆನ್ಸಿನಲ್ಲಿರುವ ಮುನಿರತ್ನ ಅದೇ ಭರದಲ್ಲಿ ಇಂಥಾ ಡಿಸೈನುಗಳನ್ನು ಹೊರ ಬಿಟ್ಟಿದ್ದಾರೆ. ಯಾವ್ಯಾವುದೋ ಸಿನಿಮಾಗಳ ಯಾರದ್ದೋ ದೇಹಕ್ಕೆ ಸಾಯಿಕುಮಾರ್, ಅರ್ಜುನ್ ಸರ್ಜಾರ ತಲೆ ಸೇರಿಸಿ ವಿರೂಪಗೊಳಿಸಿದ್ದಾರೆ. ಇನ್ನು ದರ್ಶನ್ ಅವರ ಹಿನ್ನೆಲೆಗೆ ಬಳಸಿರುವ ಸ್ಕ್ರೀನುಗಳು ಕಂಪನಿ ನಾಟಕದ ಪರದೆಯಂತಿದೆ. 

ಕನ್ನಡ ಚಿತ್ರರಂಗದಲ್ಲಿ ಸಾಯಿ, ಮಣಿ, ದೇವಿ, ಅವಿ, ವಿಶ್ವ, ಲಕ್ಕಿ, ಮೋಹನ್, ಆದರ್ಶ ಸೇರಿದಂತೆ ಎಂತೆಂಥಾ ಕ್ರಿಯಾಶೀಲ ಡಿಸೈನರುಗಳಿದ್ದಾರೆ. ಇವರಲ್ಲಿ ಯಾರಿಗಾದರೂ ಕೊಟ್ಟಿದ್ದರೆ, ಬಾಹುಬಲಿ, ಮಗಧೀರರನ್ನೂ ಮೀರಿಸುವ ಕಲಾಕೃತಿ ಸೃಷ್ಟಿಸುತ್ತಿದ್ದರು. ಆದರೆ ಥೇಟು ಕುರುಕ್ಷೇತ್ರ ಕಾಲದ ಪಳೆಯುಳಿಕೆಯಂತೆ ವಿನ್ಯಾಸ ಮಾಡುವ ಮಸ್ತಾನ್ ಅವರಿಂದ ಈ ಡಿಸೈನುಗಳನ್ನು ಮಾಡಿಸಿದ್ದಾರೆಂಬ ಕುಹಕ ಎಲ್ಲೆಡೆ ಕೇಳಿ ಬರುತ್ತಿದೆ.
ಇನ್ನುಳಿದಂತೆ ಈ ಟೈಟಲ್ಲು ಬರೀ ಕುರುಕ್ಷೇತ್ರವೋ ಅಥವಾ ಮುನಿರತ್ನ ಕುರುಕ್ಷೇತ್ರವೋ ಅಂತ ಗಾಬರಿ ಹುಟ್ಟಿಸುವಂತೆಯೂ ಇದೆ. ಯಾಕೆಂದರೆ, ಮುನಿರತ್ನ ಕುರುಕ್ಷೇತ್ರದ ಫಾಂಟಿನಲ್ಲಿಯೇ ತಮ್ಮ ಹೆಸರನ್ನೂ ಗಡದ್ದಾಗಿಯೇ ಕೆತ್ತಿಸಿಕೊಂಡಿದ್ದಾರೆ. ಅಲ್ಲೇ ಕಥೆಯ ಕ್ರೆಡಿಟ್ಟನ್ನೂ ಮುನಿರತ್ನರೇ ತೆಗೆದುಕೊಂಡಿರೋದರಿಂದ ಟೈಟಲ್ಲಿನ ಬಾಧೆ ತುಸು ಹೆಚ್ಚೇ ಕಾಡುವಂತಿದೆ.
ಇದೆಲ್ಲ ಏನೇ ಇದ್ದರೂ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಗಳಿದ್ದಾವೆ. ತೀರಾ ಅಭಿಮಾನಿಗಳೂ ಬೇಸರ ಮಾಡಿಕೊಳ್ಳದಂತೆ ಈ ಪೋಸ್ಟರನ್ನು ಕ್ರಿಯೇಟಿವ್ ಆಗಿ ರೂಪಿಸಬಹುದಿತ್ತು. ಒಟ್ಟಾರೆಯಾಗಿ ಮುನಿರತ್ನರ ಕುರುಕ್ಷೇತ್ರ ಕ್ರಿಯಾಶೀಲ ಟಚ್‌ನೊಂದಿಗೇ ಟೇಕಾಫಾಗಲಿ ಎಂಬುದು ಹಾರೈಕೆ!

Share.

Leave A Reply