ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಮಾಳವಿಕಾರ ಮಳ್ಳು ಹೇಳಿಕೆಗೆ ಬಿತ್ತು ತಪರಾಕಿ!

0

ನಟಿ ಮಾಳವಿಕಾ ಅವಿನಾಶ್‌ಗೆ ಅಷ್ಟದಿಕ್ಕುಗಳಿಂದಲೂ ಮಹಾ ಮಂಗಳಾರತಿ ನಡೆಯುತ್ತಿದೆ. ಅದಕ್ಕೆ ಕಾರಣ ಹೆಣ್ತನದ ಪಡಿಪಾಟಲುಗಳನ್ನೇ ರಾಜಕೀಯ ಲಾಭಕ್ಕೆ ಬಳಸಿಕೊಂಡಂತಿರುವ ಈಕೆಯ ಅಸಂಬದ್ಧ ಹೇಳಿಕೆ. ತಾನಿರುವ ಪಕ್ಷ ಮತ್ತು ಅದರ ಜೋಭದ್ರಗೇಡಿತನದ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ತಾನೊಬ್ಬ ಹೆಣ್ಣೆಂಬುದನ್ನೂ ಮರೆತು ಮಾಳವಿಕಾ ವರ್ತಿಸಿದ್ದೇ ಈಗ ಅಂಟಿಕೊಂಡಿರೋ ವಿವಾದಕ್ಕೆ ಕಾರಣ.

ಅದೇನೋ ಮಹಾ ಕ್ರಾಂತಿಯ ಭ್ರಮೆಯೊಂದಿಗೆ ಜಿಎಸ್‌ಟಿ ಜಾರಿಗೆ ಬಂದಿದೆಯಲ್ಲಾ? ಇದರಲ್ಲಿ ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆಯನ್ನು ಸಹ್ಯವಾಗಿಸುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆಯೂ ತೆರಿಗೆ ವಿಧಿಸಿದೆ. ಹಳ್ಳಿಗಾಡಿನ ಹೆಣ್ಣುಮಕ್ಕಳಿಗೂ ಮಾರಕವಾಗುವಂಥಾ ಈ ಕ್ರಮವನ್ನು ಸದರಿ ಪಕ್ಷ ಓತಾಪ್ರೋತವಾಗಿ ಸಮರ್ಥಿಸಿಕೊಳ್ಳುತ್ತಲೂ ಇದೆ. ಇದೀಗ ಮಾಳವಿಕಾ ತನ್ನ ಪಕ್ಷದ ಮುಖಂಡರ ಗಮನ ಸೆಳೆದು ಓಲೈಸಿಕೊಳ್ಳುವ ತೆವಲಿಗೆ ಇಡೀ ದೇಶದ ಹೆಣ್ಣು ಜೀವಗಳ ತಲ್ಲಣಗಳನ್ನೇ ಪಣಕ್ಕಿಟ್ಟಿದ್ದಾರೆ.
ತಾನೇನೋ ಮಹಾ ತಿಳಿದುಕೊಂಡಿರುವಾಕೆ, ತಾನು ಹೇಳಿದ್ದೇ ಸರಿ ಎಂಬ ಒಣ ಅಹಂಕಾರ ಮೇಡಂ ಮಾಳವಿಕಾರ ಲಾಗಾಯ್ತಿನ ಆಸ್ತಿ. ಅದೇ ಹಾದಿಯಲ್ಲಿಯೇ ಸ್ಯಾನಿಟರಿ ಪ್ಯಾಡ್ಸ್ ಬಗ್ಗೆಯೂ ಆಕೆ ಭಾಷಣ ಕುಟ್ಟಿ ಹೆಣ್ಣು ಕುಲದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಪ್ರಕಾರ ಈ ಪ್ಯಾಡ್‌ಗಳು ವಿದೇಶಿ ಸಂಸ್ಕೃತಿಯ ಹೇರಿಕೆಯ ಸಂಕೇತ. ಈ ಹಿಂದೆ ಮುಟ್ಟಿನ ಸ್ರಾವದಿಂದ ಪಾರಾಗಲು ಬಟ್ಟೆ ಬಳಸುವ ಪದ್ಧತಿ ಇತ್ತಲ್ಲಾ? ಅದು ಹೈಜೆನಿಕ್. ಅದು ನಮ್ಮ ಸಂಸ್ಕೃತಿ. ಆದ್ದರಿಂದ ಸ್ಯಾನಿಟರಿ ಪ್ಯಾಡ್‌ಗಳ ಮೇಲಿನ ಸುಂಕದಿಂದ ಹೆಣ್ಣುಮಕ್ಕಳಿಗೆ ಏನೂ ತೊಂದರೆಯಿಲ್ಲ. ವಯಸ್ಸಿಗೆ ಬಂದ ಹೆಣ್ಣುಮಕ್ಕಳೆಲ್ಲ ಋತುಚಕ್ರದ ಸಂದರ್ಭದಲ್ಲಿ ಬಟ್ಟೆ ಕಟ್ಟಿಕೊಂಡು ಸಂಸ್ಕೃತಿ ಉಳಿಸಬೇಕೆಂಬುದು ಈಯಮ್ಮನ ಆಲಾಪ!
ಮಾಳವಿಕಾ ಈವತ್ತು ತಾನಿರುವ ಪಕ್ಷದಂತೆಯೇ ಸನಾತನವಾದದ ಮಲವನ್ನೇ ತಲೆ ತುಂಬಿಕೊಳ್ಳದೇ ಹೋಗಿದ್ದರೆ ಆಕೆಯ ಬಾಯಿಂದ ಇಂಥಾದ್ದೊಂದು ಹೇಳಿಕೆ ಹೊರ ಬರಲು ಸಾಧ್ಯವಿರುತ್ತಿರಲಿಲ್ಲ. ಈಕೆ ಬಟ್ಟೆಯ ಬಳಕೆಯೇ ಹೈಜೆನಿಕ್ ಅಂತ ಒದರುತ್ತಿದ್ದಾರಲ್ಲಾ? ಅದರಿಂದ ಮಹಿಳೆಯರು, ಹೆಣ್ಣುಮಕ್ಕಳು ಪಡುತ್ತಿದ್ದ ಪಾಡೇನೆಂಬುದನ್ನು ಓರ್ವ ಮಹಿಳೆಯಾಗಿ ಮಾಳವಿಕಾಗೆ ಹೇಳುವ ಅಗತ್ಯವೇನೂ ಇಲ್ಲ. ಆದರೆ ಸದ್ಯ ಯಾರನ್ನೋ ಓಲೈಸಿಕೊಳ್ಳುವ ದರ್ದಿಗೆ ಬಿದ್ದಿರುವ ಆಕೆಗೆ ಸಂವೇದನೆ, ಸಂಕಟಗಳೂ ರಾಜಕೀಯ ವ್ಯಾಪಾರದ ಸರಕಿನಂತೆಯೇ ಕಾಣಿಸುತ್ತಿರುವಂತಿದೆ.
ಮಾಳವಿಕಾ ಪ್ರಕಾರ ಹೈಜೆನಿಕ್ ಅನ್ನಿಸಿರೋ ಬಟ್ಟೆಗಳ ಬಳಕೆಯಿಂದ ಅದೆಷ್ಟೋ ಹೆಣ್ಣುಮಕ್ಕಳು ನಾನಾ ಗುಪ್ತ ರೋಗಗಳಿಂದ ನರಳಿದ್ದಾರೆ. ಅದೆಷ್ಟೋ ಹೆಣ್ಣು ಜೀವಗಳಿಗೆ ತಿಂಗಳ ಮೂರು ದಿನ ಅದರಿಂದಲೇ ನರಕದರ್ಶನವಾಗಿದೆ. ಖುತುಚಕ್ರದ ದಿನಗಳಲ್ಲಿ ಬಟ್ಟೆಗಳ ಬಳಕೆಯಿಂದ ಶಾಶ್ವತವಾಗಿ ಗುಪ್ತ ಸೋಂಕುಗಳಿಗೆ ಬಲಿಯಾದವರ ಸಂಖ್ಯೆಯೂ ಲೆಕ್ಕವಿಲ್ಲದಷ್ಟಿದೆ.
ಆದರೆ ತಾನೂ ಹೆಣ್ಣಾಗಿ ಇಂಥಾ ಸೂಕ್ಷ ವಿಚಾರಗಳಲ್ಲಿಯೂ ತಾನಿರೋ ಪಕ್ಷದ ಅಜೆಂಡಾಳಿಗೆ ತಕ್ಕುದಾಗಿ ಮಾತನಾಡುವ ಮಾಳವಿಕಾರನ್ನು ಜನನಾಯಾಕಿಯಾಗಿ ಅಷ್ಟೇ ಅಲ್ಲ, ಜೀವಪರ ವ್ಯಕ್ತಿತ್ವವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ!

Share.

Leave A Reply