ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

‘ಮಣ್ಣಿನ’ ಮಗನ ‘ಪ್ರತಿಮೆ’ಯನ್ನು ನೀರಲ್ಲಿ ಮುಳುಗಿಸೋದು ಸರಿಯೇ?

0

ಡಾ.ರಾಜ್ ಪ್ರತಿಮೆ ವಿಸರ್ಜನೆ ಎಂಬುದು ಪ್ರತೀತಿಯಂತಾಗಿ ಬಿಟ್ಟರೆ ಮುಂದೆ ಪ್ರಸಿದ್ಧರ ಹುಟ್ಟುಹಬ್ಬವನ್ನು ಇದೇ ಮಾದರಿಯಲ್ಲಿ ಆಚರಿಸೋ ಕ್ರೇಜು ಶುರುವಾದರೂ ಅಚ್ಚರಿಯೇನಿಲ್ಲ. ನಾಳೆ ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಅಭಿಮಾನಿಗಳೂ ಇದೇ ಹೆಜ್ಜೆಯಿಟ್ಟು ಅದು ಏರಿಯಾ ‘ಹುತಾತ್ಮರ ಹುಟ್ಟುಹಬ್ಬಕ್ಕೂ ಪಸರಿಸಿದರೆ ಬೆಂಗಳೂರಲ್ಲಿ ಅಳಿದುಳಿದ ಕೆರೆಗಳೂ ಅಂತರ್ಧಾನ ಹೊಂದುವುದು ಗ್ಯಾರೆಂಟಿ.

ಡಾ. ರಾಜ್ ಕುಮಾರ್ ಅವರಿಗೀಗ ಎಂಬತ್ತೊಂಬತ್ತನೇ ಹುಟ್ಟುಹಬ್ಬದ ಸಂಭ್ರಮ. ಕನ್ನಡ ನಾಡಿನಲ್ಲಿ ಅಪ್ಪನಾಗಿ, ಅಣ್ಣನಾಗಿ, ಬಂಧುವಾಗಿ ಶಾಶ್ವತವಾಗಿ ನೆಲೆ ನಿಂತಿರುವ ಅವರು ಮರಣದ ವಾಸ್ತವವನ್ನೂ ಮೀರಿ ಆವರಿಸಿಕೊಂಡಿರುವ ಚೈತನ್ಯ. ಹೀಗಿರೋದರಿಂದಲೇ ಪ್ರತೀ ವರ್ಷ ಅವರ ಹುಟ್ಟುಹಬ್ಬವೆಂಬುದು ಇಡೀ ನಾಡಿನ ಸಂಭ್ರಮವಾಗಿ ಕಳೆಗಟ್ಟುತ್ತದೆ.
ಈ ಸಲ ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಲು ಅಣಿಯಾಗಿದೆ. ಶಿವಣ್ಣನ ಅಭಿಮಾನಿಗಳು ಈ ಮೂಲಕ ರಾಜ್ ಹುಟ್ಟುಹಬ್ಬವನ್ನು ನಿಜವಾಗಿಯೂ ಹಬ್ಬದಂತೆ ಆಚರಿಸುವ ಹುಮ್ಮಸ್ಸಿನಿಂದ ಸಮಾರಂಭವೊಂದಕ್ಕೆ ಮುಹೂತ ನಿಗಧಿ ಮಾಡಿದೆ. ಆದರೆ, ಈ ಸಮಾರಂಭದ ರೂಪುರೇಷೆಗಳೇ ಒಂದಷ್ಟು ತಕರಾರುಗಳನ್ನೂ ಹುಟ್ಟಿಸಿದೆ!
ಈ ಸಮಾರಂಭದಲ್ಲಿ ಜೇಡಿ ಮಣ್ಣಿನಿಂದ ತಯಾರು ಮಾಡಲಾದ ೬ ಅಡಿ ಎತ್ತರದ ಡಾ.ರಾಜ್ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಮೂರು ದಿನದ ನಂತರ ಸ್ಯಾಂಕಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆಯಂತೆ. ಇದು ಒಂದು ಅನರ್ಥಕಾರಿ ಸಂಪ್ರದಾಯದ ಹುಟ್ಟಿಗೆ ಕಾರಣವಾಗೋದಿಲ್ಲವೇ? ಅದು ಸಂಭವಿಸಿದರೆ ಅದರ ಸುತ್ತಾ ಮೇರು ನಟ ರಾಜ್ ಕುಮಾರ್ ಹೆಸರೂ ಥಳುಕು ಹಾಕಿಕೊಳ್ಳೋದು ಅನರ್ಥಕಾರಿಯಾಗೋದಿಲ್ಲವೇ? ಈ ಬಗ್ಗೆ ನಿಜಕ್ಕೂ ಅಭಿಮಾನಿಗಳು ಆಲೋಚಿಸಿ ಹೆಜ್ಜೆ ಇಡಬೇಕಿದೆ.
ಯಾಕೆಂದರೆ, ಈಗಾಗಲೇ ಒಂದು ವರ್ಷಕ್ಕೆ ಒಂದೇ ಸಲ ಬರುವ ಗಣೇಶನ ಹಬ್ಬದ ಸಂರ್ಭದಲ್ಲಿ ಮೂರ್ತಿ ವಿಸರ್ಜನೆಯಿಂದಾಗುತ್ತಿರೋ ಅನಾಹುತ ಎಲ್ಲರಿಗೂ ತಿಳಿದೇ ಇದೆ. ಹೀಗಿರೋವಾಗ ಡಾ.ರಾಜ್ ಪ್ರತಿಮೆ ವಿಸರ್ಜನೆ ಎಂಬುದು ಪ್ರತೀತಿಯಂತಾಗಿ ಬಿಟ್ಟರೆ ಮುಂದೆ ಪ್ರಸಿದ್ಧರ ಹುಟ್ಟುಹಬ್ಬವನ್ನು ಇದೇ ಮಾದರಿಯಲ್ಲಿ ಆಚರಿಸೋ ಕ್ರೇಜು ಶುರುವಾದರೂ ಅಚ್ಚರಿಯೇನಿಲ್ಲ. ನಾಳೆ ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಅಭಿಮಾನಿಗಳೂ ಇದೇ ಹೆಜ್ಜೆಯಿಟ್ಟು ಅದು ಏರಿಯಾ ‘ಹುತಾತ್ಮರ ಹುಟ್ಟುಹಬ್ಬಕ್ಕೂ ಪಸರಿಸಿದರೆ ಬೆಂಗಳೂರಲ್ಲಿ ಅಳಿದುಳಿದ ಕೆರೆಗಳೂ ಅಂತರ್ಧಾನ ಹೊಂದುವುದು ಗ್ಯಾರೆಂಟಿ.
ಡಾ. ರಾಜ್ ಅಂದರೆ ಸ್ಫೂರ್ತಿದಾಯಕ ವ್ಯಕ್ತಿತ್ವ. ಸಿನಿಮಾಗಳಲ್ಲೂ, ನಿಜ ಜೀವನದಲ್ಲೂ ಅವರದ್ದು ಆದರ್ಶದ ನಡೆ. ಇಂಥಾ ಮಹಾನ್ ಚೇತನದ ಸ್ಮರಣೆಯೂ ಮತ್ತೊಂದು ಆದರ್ಶದ ಹುಟ್ಟಾಗುವಂತಾದರೆ ಅದು ನಿಜವಾಗಿ ರಾಜ್ ಕುಮಾರ್ ಅವರಿಗೆ ಸಲ್ಲಿಸುವ ಮಹಾನ್ ಗೌರವ. ಅಂದಹಾಗೆ, ಬೆಂಗಳೂರಿನ ಸಕಲ ಏರಿಯಾಗಳಲ್ಲಿಯೂ ನಿರ್ಮಾಣವಾಗಿರೋ ರಾಜ್ ಪುತ್ಥಳಿಗೂ, ಈಗ ಶಿವಣ್ಣ ಅಭಿಮಾನಿಗಳು ಪ್ರತಿಷ್ಠಾಪಿಸ ಹೊರಟಿರೋ ಪ್ರತಿಮೆಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಪುತ್ಥಳಿ ಅವರ ಚಿತ್ರಗಳಂತೆಯೇ ಯಾವತ್ತಿಗೂ ಅಜರಾಮರ. ಆ ಮೂಲಕ ಅವರ ಸ್ಮರಣೆ ಸದಾ ಚಾಲ್ತಿಯಲ್ಲಿರುತ್ತದೆ. ಭಾರತದಲ್ಲಿ ಅತಿ ಹೆಚ್ಚು ಪ್ರತಿಮೆಗಳನ್ನು ಹೊಂದಿರುವ ನಟ ರಾಜ್. ಅದು ಅಭಿಮಾನದ ಗಟ್ಟಿತನದ ಸೂಚಕವೂ ಹೌದು.
ಆದರೆ ಈ ಪ್ರತಿಮೆ, ವಿಸರ್ಜನೆ ಮುಂತಾದವೆಲ್ಲ ಕ್ಷಣಿಕ ಅಭಿಮಾನವನ್ನಷ್ಟೇ ಸೂಚಿಸುತ್ತವೆ. ಇದೊಂದು ಟ್ರೆಂಡಿನಂತಾಗಿ ಕೆರೆಗಳೆಲ್ಲ ಅವರಿವರ ವಿಗ್ರಹಗಳ ಅವಶೇಷದಿಂದ ತುಂಬಿ ಹೋದರೆ ಜನ ‘ಇದು ರಾಜ್‌ಕುಮಾರ್ ವಿಗ್ರಹದಿಂದಲೇ ಆರಂಭವಾಗಿದ್ದು ಅಂತ ನೆನಪಿಸಿಕೊಳ್ಳುತ್ತಾರೆ. ಇಂಥಾದ್ದೊಂದು ನಕಾರಾತ್ಮಕ ವಿಚಾರಕ್ಕೆ ರಾಜ್ ಹೆಸರು ಮೆತ್ತಿಕೊಂಡರದು ಘೋರ ದುರಂತ. ಡಾ.ರಾಜ್ ಕುಮಾರ್ ಪಕ್ಕದಲ್ಲಿ ಬಂದು ನಿಂತ ಸಾಮಾನ್ಯ ಮನುಷ್ಯನನ್ನು ಎಷ್ಟು ಪ್ರೀತಿಯಿಂದ ಕಾಣುತ್ತಿದ್ದರೋ, ಪ್ರಕೃತಿಯನ್ನೂ ಕೂಡಾ ಅಷ್ಟೇ ಪ್ರೀತಿಸುತ್ತಿದ್ದರು. ಅದನ್ನವರು ದೇವರ ವರ ಅಂತಲೇ ನಂಬಿದ್ದರು. ಆ ಆದರ್ಶವನ್ನು ಅಭಿಮಾನದ ಉನ್ಮಾದದಲ್ಲಿ ಬಲಿಯಾಗಿಸೋದು ಎಷ್ಟು ಸರಿ ಎಂಬುದರ ಬಗ್ಗೆ ಅಭಿಮಾನಿಗಳು ಆಲೋಚಿಸಿ ಮುಂದಡಿ ಇಡಬೇಕಿದೆ…
ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿ, ತಮ್ಮದೇ ಆದ ಘನತೆಯನ್ನು ಉಳಿಸಿಕೊಂಡಿರುವ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ರಂಥವರು ಅಖಿಲ ಕರ್ನಾಟಕ ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಕಾರ್ಯಾಧ್ಯಕ್ಷ ಸ್ಥಾನದಲ್ಲಿದ್ದಾರೆ. ಶ್ರೀಕಾಂತ್‌ರಂಥ ಪ್ರಜ್ಞಾವಂತ ವ್ಯಕ್ತಿ ಹೀಗೆ ವಿಗ್ರಹ ಪ್ರತಿಷ್ಠಾಪನೆ, ವಿಸರ್ಜನೆಯಂಥ ಕಾರ್ಯಕ್ಕೆ ಹೇಗೆ ಸಮ್ಮತಿಸಿದರೋ ಗೊತ್ತಿಲ್ಲ. ಇಷ್ಟಕ್ಕೂ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರ ಆದಿಯಾಗಿ ಸ್ವತಃ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಮುಂತಾದವರೂ ಪಾಲ್ಗೊಳ್ಳುತ್ತಿದ್ದು, ಒಂದು ವೇಳೆ ಸಾರ್ವಜನಿಕರು, ಪರಿಸರ ಸಂರಕ್ಷಣಾ ಸಂಘಟನೆಗಳು ಈ ಕುರಿತು ತಕರಾರೆತ್ತಿದರೆ ಯಾರಿಗಾದರೂ ಅದು ಮುಜುಗರದ ಸಂದರ್ಭವಾಗುವುದಲ್ಲವೇ?

– ಅರುಣ್ ಕುಮಾರ್.ಜಿ

(ಈ ಲೇಖನ ಯಾವುದೇ ವ್ಯಕ್ತಿ/ಸಂಘಟನೆ/ಸಮಾರಂಭ ಸಂಘಟಕರಿಗೆ ಬೇಸರ ಉಂಟು ಮಾಡುವ ಉದ್ದೇಶ ಹೊಂದಿಲ್ಲ.)

ರಾಜ್ ಕುಮಾರ್ ಅವರದ್ದು ಕೆರೆನೀರಿನಲ್ಲಿ ಕರಗುವ, ಲೀನವಾಗುವ ವ್ಯಕ್ತಿತ್ವವಲ್ಲ. ಯಾವ ಪ್ರತಿಮೆಗಳಿಟ್ಟರೂ ಇಡದಿದ್ದರೂ ರಾಜ್‌ಕುಮಾರ್ ನಮ್ಮೊಂದಿಗೆ ಇದ್ದೇಇರುತ್ತಾರೆ. “ಕುವೆಂಪು ವಿದ್ಯಾವಂತರನ್ನ ತಲುಪಿದ್ರು, ಡಾ.ರಾಜ್ ಕುಮಾರ್ ಅವಿದ್ಯಾವಂತರನ್ನೂ ತಲುಪಿದ್ರು” ಅಂತ ಬರಗೂರು ರಾಮಚಂದ್ರಪ್ಪನವರು ಹೇಳಿದ್ದಿನ್ನೂ ಮನಸಲ್ಲಿ ಕೂತು ಬಿಟ್ಟಿದೆ. ರಾಜ್ ಕುಮಾರ್ ಅಂದ್ರೆ ಯಾವುದೇ ಒಂದು ಜಾತಿ ಧರ್ಮಗಳ ಆಚರಣೆಗಳಿಗೆ ಸೀಮಿತವಾದವರಲ್ಲ. ಹಾಗಿರೋವಾಗ ಇಂಥಾ ಪ್ರತಿಮೆ, ಹೋಮ ಹವನಗಳ ಮೂಲಕ ಅವರನ್ನು ಒಂದು ಧರ್ಮಕ್ಕೆ ಸಿಲುಕಿಸುವ ಕಾರ್ಯ, ಮೌಢ್ಯ ಬಿತ್ತುವ ಆಚರಣೆ ಎಷ್ಟು ಸರಿ ಅಂತ ಶಿವಣ್ಣನ ಅಭಿಮಾನಿಗಳು ಆಲೋಚಿಸಬೇಕಿದೆ. ಪುತ್ಥಳಿಯಂಥಾದ್ದು ಸದಾ ನಮ್ಮ ನಡುವೆಯೇ ಇರುತ್ತವೆ. ಆದರೆ ಈ ಪ್ರತಿಮೆ, ಪೂಜೆ, ವಿಸರ್ಜನೆಗಳೆಲ್ಲ ಮೌಢ್ಯವನ್ನ ಬಿಂಬಿಸುತ್ತವೆ. ರಾಜ್ ಅವರ ವ್ಯಕ್ತಿತ್ವದ ದೈವತ್ವವನ್ನ ಮನಸಲ್ಲಿಟ್ಟು ಆರಾಧಿಸಬೇಕೇ ಹೊರತು ಇಂಥಾ ಪ್ರದರ್ಶನಕ್ಕಿಡುವುಸು ಸರಿ ಅನ್ನಿಸೋದಿಲ್ಲ. ಇದರ ಬದಲಾಗಿ ರಾಜ್‌ಕುಮಾರ್ ಅವರ ಹೆಸರಲ್ಲಿ ಒಳ್ಳೆ ಕೆಲಸಗಳನ್ನ ಮಾಡಲಿ. ರಾಜ್ಯಾಧ್ಯಂತ ಪಾಳು ಬಿದ್ದ ಕೊಳವೆ ಬಾವಿಗಳು ಜೀವ ಬಲಿ ಪಡೆಯುತ್ತಿವೆ. ಅವುಗಳನ್ನು ಮುಚ್ಚಲು ಸರ್ಕಾರವೂ ಮನಸು ಮಾಡುತ್ತಿಲ್ಲ. ಅಂಥಾ ಕಾರ್ಯವನ್ನು ರಾಜ್ ಕುಮಾರ್ ಅವರ ಹೆಸರಲ್ಲಿ ಮಾಡಿದರೆ ಅದಕ್ಕಿಂತ ಸಾರ್ಥಕ್ಯ ಬೇರೇನಿದೆ? ಯಶ್ ಅವರಂತೆ ರೈತರ ಸಮಸ್ಯೆಗಳಿಗೆ ಮಿಡಿಯಲಿ, ಯಾರದ್ದೋ ಸಂಕಷ್ಟಕ್ಕೆ ಹೆಗಲಾಗಲಿ. ಅದು ರಾಜ್ ಕುಮಾರ್ ಎಂಬ ಮೇರು ವ್ಯಕ್ತಿತ್ವಕ್ಕೆ ಸಲ್ಲಿಸೋ ನಿಜವಾದ ಗೌರವ. ಅದು ಬಿಟ್ಟು ಇಂಥಾ ಮೌಢ್ಯಗಳಿಂದ ಯಾವ ಒಳಿತೂ ಆಗಲಾರದು.
-ಚಕ್ರವರ್ತಿ ಚಂದ್ರಚೂಡ್
ಪತ್ರಕರ್ತ, ಸಿನಿಮಾ ನಿರ್ದೇಶಕ

Share.

Leave A Reply