ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಬೇಡ ಕೃಷ್ಣ ನವರಂಗಿಯಾಟ! 

0
ಮದರಂಗಿ ಕೃಷ್ಣನ ಮೇಲಿರೋ ಆರೋಪವೇನು ಗೊತ್ತಾ? ಚಿತ್ರರಂಗವೆಂಬುದು ಸಾಗರವಿದ್ದಂತೆ. ಅದಕ್ಕೆ ದಿನ ನಿತ್ಯವೂ ಸಾಕಷ್ಟು ಹನಿಗಳು ಜಮೆಯಾಗುತ್ತಲೇ ಇರುತ್ತವೆ. ಇಂಥಾದ್ದರ ನಡುವೆ ಟ್ಯಾಲೆಂಟಿನಿಂದಲೇ ಸ್ವತಂತ್ರ ಅಸ್ತಿತ್ವ ಕಟ್ಟಿಕೊಳ್ಳೋದು ನಿಜಕ್ಕೂ ಕಷ್ಟದ ಕೆಲಸ. ಆ ಹಾದಿಯಲ್ಲಿ ಗಮನ ಸೆಳೆದು ಒಂದಷ್ಟು ನಿರೀಕ್ಷೆ ಹುಟ್ಟಿಸೋದೆಂದರೆ ಸಲೀಸಿನ ಸಂಗತಿಯೇನಲ್ಲ. ಸದ್ಯ ಅಂಥಾದ್ದೊಂದು ನಿರೀಕ್ಷೆಗಳ ಕೇಂದ್ರ ಬಿಂದುವಾಗಿ ಹೊರ ಹೊಮ್ಮಿರುವ ಯುವ ನಟ ಮದರಂಗಿ ಕೃಷ್ಣ.
ಹೀರೋ ಆಗಲು ಬೇಕಾದ ಎಲ್ಲ ಅರ್ಹತೆಗಳಿದ್ದರೂ ಒಂದು ಬ್ರೇಕ್‌ಗಾಗಿ ಹಂಬಲಿಸುತ್ತಿರೋ ಕೃಷ್ಣ ಈ ವರೆಗೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದರೂ ಅದೇಕೋ ಅದೃಷ್ಟವೆಂಬುದು ಕೈ ಗೂಡುತ್ತಿಲ್ಲ. ಆದರೂ ಛಲ ಬಿಡದೇ ಮುಂದುವರೆಯುತ್ತಿರೋ ಕೃಷ್ಣ ಮುಖ್ಯಭೂಮಿಕೆಯಲ್ಲಿರುವ ಜಾಲಿ ಬಾರು ಮತ್ತು ಪೋಲಿ ಗೆಳೆಯರು. ಹುಚ್ಚ-2 ಚಿತ್ರಗಳು ಬಿಡುಗಡೆಯ ಹೊಸ್ತಿಲಲ್ಲಿದೆ. ವಿಷಯ ಅದಲ್ಲ; ಈ ಕೃಷ್ಣ ಈ ವರೆಗೂ ಯಾವ ನಖರಾಗಳೂ ಇಲ್ಲದೇ, ವಿವಾದಗಳ ಗೋಜಿಗೂ ಹೋಗದೆ ಮುಂದುವರೆಯುತ್ತಿದ್ದಾತ. ಇಂಥಾ ನಟನ ಮೇಲೆ ಇತ್ತೀಚೆಗೆ ಸಣ್ಣಗೆ ಅಪಸ್ವರಗಳು ಗಾಂಧಿನಗರದ ತುಂಬಾ ಹಬೆಯಾಡಲಾರಂಭಿಸಿದೆ. ಹಾಗೆ ನೋಡಿದರೆ ಗೆಲ್ಲಲೇಬೇಕೆಂಬ ಬೆಂಕಿಯನ್ನ ಎದೆಯೊಳಗಿಟ್ಟುಕೊಂಡೇ ಕ್ರಿಯಾಶೀಲವಾಗಿರೋ ಕೃಷ್ಣ ಅವಕಾಶ ಕೊಡಲು ಬಂದ ನಿರ್ಮಾಪಕರನ್ನು ಕಾಡಿದವನಲ್ಲ. ಯಾವ ಡಿಮ್ಯಾಂಡುಗಳನ್ನೂ ಇಟ್ಟವನಲ್ಲ. ಎಲ್ಲದಕ್ಕೂ ಸಹಕರಿಸುತ್ತಲೇ ಸಾಗುವ ಈತ ಚಿತ್ರವೊಂದು ಅಂತಿಮ ಹಂತ ತಲುಪಿದಾಕ್ಷಣ ತಣ್ಣಗೆ ನಖರಾ ಶುರುವಿಟ್ಟುಕೊಳ್ಳುತ್ತಾನೆಂಬ ಅಸಹನೆ ಸಿನಿಮಾ ಸೆಟ್ಟಿನಾಚೆಗೂ ಕೊತಗುಡಲಾರಂಭಿಸಿದೆ.
ಸಿನಿಮಾ ಅಂದರೇನೇ ಮಹಾನ್ ರಿಸ್ಕಿನ ಕೆಲಸ. ಇಲ್ಲಿ ಸಿನಿಮಾವೊಂದು ಶುರುವಾಗಿ ಬಿಡುಗಡೆಯ ಹಂತ ತಲುಪೋದೆಂದರೆ ಗಜ ಪ್ರಸವ ಇದ್ದಂತೆ. ತೀರಾ ಸ್ಟಾರುಗಳ ಸಿನಿಮಾಗಳೇ ನಿರ್ಮಾಣ ಸೇರಿದಂತೆ ನಾನಾ ವಿಭಾಗಗಳ ಒಳ ಅಸಹನೆಗಳಿಂದ ಕಂಗಾಲಾದ ನಾನಾ ಉದಾಹರಣೆಗಳಿದ್ದಾವೆ. ಅಂತಿರೋವಾಗ ಮದರಂಗಿ ಕೃಷ್ಣನಂಥವರ ಚಿತ್ರಗಳು ನೀಟಾಗಿ ಮುಹೂರ್ತ ಕಂಡು ಚಿತ್ರೀಕರಣ ಮುಗಿಸಿಕೊಂಡು ಸಲೀಸಾಗಿ ಚಿತ್ರಮಂದಿರ ಸೇರುತ್ತವೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಹೀಗೆ ಕೊಂಚ ಏರುಪೇರಾದಾಕ್ಷಣ ಕೃಷ್ಣನ ರಂಗಿನಾಟ ಶುರುವಾಗುತ್ತದೆಂಬುದು ಸದ್ಯದ ಕಂಪ್ಲೆಂಟು. ಮದರಂಗಿ ಕೃಷ್ಣ ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೇರುವ ವಿಪುಲ ಸಾಧ್ಯತೆಗಳಿರುವ ನಟ. ಆದರೆ ಆ ಹಾದಿಯಲ್ಲಿ ಬಂದೊದಗುವ ನಿರಾಸೆಗಳನ್ನು ಎಷ್ಟು ಸಾವಧಾನವಾಗಿ ದಾಟಿಕೊಳ್ಳುತ್ತಾನೆಂಬುದರ ಮೇಲೆ ಭವಿಷ್ಯ ನಿಂತಿದೆ. ಸಿನಿಮಾವೊಂದು ಚಿತ್ರೀಕರಣ ಮುಗಿಸಿಕೊಳ್ಳುವವರೆಗೆ ಇರೋ ಸಾವಧಾನ ಕೊಂಚ ಏರುಪೇರಿನಾಚೆಗೆ ಚಿತ್ರ ಮಂದಿರ ತಲುಪೋವರೆಗಾದರೂ ಅದೇ ಸಹಕಾರ ನೀಡುತ್ತಾ ಸಾಗೋ ವ್ಯವಧಾನ ಮದರಂಗಿ ಕೃಷ್ಣನಿಗೆ ದಕ್ಕಲೆಂಬುದು ಹಾರೈಕೆ!
Share.

Leave A Reply