ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಕನ್ನಡಿಗರ ಹೆಗಲಲ್ಲಿ ಬಂದೂಕಿಟ್ಟು ಬಾಹುಬಲಿ ಮೇಲೆ ಫೈರ್!

0

ತಿಕ್ಕಲುತನಗಳಿಗೆ ಹೆಸರುವಾಸಿಯಾಗಿರೋ ನಿರ್ದೇಶಕ ರಾಂಗೋಪಾಲ್ ವರ್ಮಾ ವಿವಾದ ಸೃಷ್ಟಿಸೋದರಲ್ಲಿಯೂ ನಿಸ್ಸೀಮ. ಒಂದು ಕಾಲದಲ್ಲಿ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ವರ್ಮಾ ಈಗ ಖಾಲಿ ಕೂತಿದ್ದಾರೆ. ಹೀಗೆ ತಮ್ಮ ಪಾಲಿಗೆ ಪರ್ಮನೆಂಟಾಗಿ ಶೂನ್ಯ ಮಾಸವೊಂದು ಅಮರಿಕೊಂಡಿರುವ ಹೊತ್ತಲ್ಲಿಯೇ ತಮ್ಮ ಓರಗೆಯವರು ಚೆಂದದ ಚಿತ್ರ ಮಾಡುತ್ತಿರೋದನ್ನ ಕಂಡು ವರ್ಮಾ ಒಳಗೊಳಗೇ ಬಾಧೆ ಅನುಭವಿಸುತ್ತಿದ್ದಾರೆ.

ಇಂಥಾದ್ದೊಂದು ಸಂಕಷ್ಟವನ್ನವರು ಅವರಿರಿವರ ಮೇಲೆ ಸುಖಾ ಸುಮ್ಮನೆ ಹರಿ ಹಾಯುತ್ತಾ, ಕೆಣಕುವ ಮೂಲಕ ಹೊರ ಹಾಕುತ್ತಿದ್ದಾರೆ. ಇದೀಗ ವರ್ಮಾ ಸುಮ್ಮನಿರಲಾರದೆ ಕನ್ನಡಿಗರ ಭಾಷಾಭಿಮಾನದ ಬಗ್ಗೆ ಲೇವಡಿ ಮಾಡಿ ವಿವಾದದ ಇರುವೆ ಬಿಟ್ಟುಕೊಂಡಿದ್ದಾರೆ!
`ಈ ಕನ್ನಡಿಗರಿಗೆ ಭಾಷಾಭಿಮಾನವೇ ಇಲ್ಲ. ತೆಲುಗಿನ ಬಾಹುಬಲಿ-೨ ಚಿತ್ರ ಕರ್ನಾಟಕದಲ್ಲಿ ಸೂಪರ್ ಹಿಟ್ಟಾಗಿದ್ದೇ ಅದಕ್ಕೆ ಸಾಕ್ಷಿ. ಒಂದು ಕಡೆ ಕನ್ನಡದಲ್ಲಿ ಪರಭಾಷೆಯಿಂದ ಡಬ್ಬಿಂಗ್ ವಿರುದ್ಧ ಹೋರಾಟ ನಡೆಯುತ್ತಿದೆ. ಮತ್ತೊಂದೆಡೆ ಬಾಹುಬಲಿಯನ್ನು ಕನ್ನಡಿಗರೇ ಗೆಲ್ಲಿಸಿದ್ದಾರೆ. ಈಗ ಭಾಷಾಭಿಮಾನ ಇಲ್ಲದ ತಮ್ಮವರ ವಿರುದ್ಧವೇ ಹೋರಾಡುವ ಸ್ಥಿತಿ ಕನ್ನಡಿಗರಿಗೆ ಬಂದಿದೆ ಅಂತೆಲ್ಲ ಸರಣಿ ಟ್ವೀಟ್ ಮಾಡೋ ಮೂಲಕ ವರ್ಮಾ ಕನ್ನಡಿಗರನ್ನು ಕೆಣಕಿದ್ದಾರೆ.
ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ಪ್ರಳಯಾಂತಕ ವರ್ಮಾ ಕನ್ನಡಿಗರ ಹೆಗಲ ಮೇಲೆ ಬಂದೂಕಿಟ್ಟು ತಮ್ಮದೇ ಭಾಷೆಯ ಬಾಹುಬಲಿ ಸಿನಿಮಾ ಟೀಮಿನ ಮೇಲೆ ಗುಂಡು ಹಾರಿಸಿದ್ದಾರೆ. ಸಾಮಾನ್ಯವಾಗಿ ಹೊಸತೇನನ್ನೂ ಹುಟ್ಟಿಸುವ ಯೋಗ್ಯತೆ ಕಳೆದುಕೊಂಡಾಗ ಆಸುಪಾಸಿನವರ ಕ್ರಿಯೇಟಿವಿಟಿಯೂ ಕರುಬು ಹುಟ್ಟಿಸುತ್ತದೆ. ಸದ್ಯ ರಾಂಗೋಪಾಲ್ ವರ್ಮಾನ ಹೊಟ್ಟೆಯಲ್ಲಿ ವೋಡ್ಕಾದೊಂದಿಗೆ ಕಿಚ್ಚು ಹೊತ್ತಿಸಿ ಧಗ ಧಗಿಸುತ್ತಿರೋದು ಇಂಥಾದ್ದೇ ಹೊಟ್ಟೆಕಿಚ್ಚು!
ಬರೀ ಹುಚ್ಚುತನ, ಅಹಂಕಾರವನ್ನೇ ಮೈತುಂಬಿಸಿಕೊಂಡಿರೋ ವರ್ಮಾ ಮರೆಗೆ ಸರಿದಿದ್ದಾರೆ. ಈ ಹೊತ್ತಲ್ಲಿಯೇ ತೆಲುಗಿನಲ್ಲಿ ಸಿನಿಮಾವನ್ನೇ ಧ್ಯಾನಿಸುವ ರಾಜಮೌಳಿಯಂಥವರು ಹೊಸಾ ಅಲೆ ಎಬ್ಬಿಸುತ್ತಿದ್ದಾರೆ. ಇದನ್ನು ಕಂಡು ಒಳಗೊಳಗೇ ರೊಚ್ಚಿಗೆದ್ದಿರೋ ವರ್ಮಾ ಪೆನ್ನು ಪೇಪರ್ ಕೈಗೆತ್ತಿಕೊಂಡಿದ್ದಿದ್ದರೆ ಹೊಸಾ ಸೃಷ್ಟಿ ಸಾಧ್ಯವಿತ್ತೇನೋ. ಆದರಾತ ವೋಡ್ಕಾ ಬಾಟಲಿಗೆ ಪರ್ಮನೆಂಟಾಗಿ ಕೈಯಿಟ್ಟಿದ್ದಾರೆ. ಒಳಗೆ ಸೇರಿದ ಪರಮಾತ್ಮ ವರ್ಮಾ ಬಾಯಿಂದ ಕೆಲಸಕ್ಕೆ ಬಾರದ ಪಡಪೋಶಿ ಮಾತುಗಳನ್ನಾಡಿಸುತ್ತಿದೆ!

Share.

Leave A Reply