One N Only Exclusive Cine Portal

ಒಂದು ಮೊಟ್ಟೆ ಹಲವು ಕಥೆ!

ಭಿನ್ನ ಸಿನಿಮಾಗಳೇ ಹಾಗೇ ದಿಢೀರನೆ ತೆರೆ ಮೇಲೆ ಬಂದು, ಯಾವ ಸೂಚನೆಯೂ ಕೊಡದೆ ನೋಡುಗರನ್ನು ಅಚ್ಚರಿಗೀಡುಮಾಡುತ್ತವೆ. ಬಹುಶಃ ಅಂಥಾ ಸಿನಿಮಾಗಳ ಗೊಂಚಲಿಗೆ ಸೇರುವ ಮತ್ತೊಂದು ಚಿತ್ರ `ಒಂದು ಮೊಟ್ಟೆಯ ಕತೆ’.
ಬಹುಶಃ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಬಹುತೇಕ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಹೊಸಬರೇ ಆಗಿರುವುದರಿಂದ ಅಂತಾ ಪ್ರಚಾರವೂ ಇಲ್ಲದೇ ಇಂಥದ್ದೊಂದು ಸಿನಿಮಾ ತಯಾರಾಗುತ್ತಿದೆ ಅನ್ನೋ ಸುಳಿವೂ ಇಲ್ಲದೆ ನಿರ್ಮಾಣವಾಗಿತ್ತು. ಯಾವಾಗ ಅದಾಗಲೇ ತಯಾರಾಗಿದ್ದ ಸಿನಿಮಾಕ್ಕೆ ಯುವ ನಿರ್ದೇಶಕ ಪವನ್ ಕುಮಾರ್ ನಿರ್ಮಾಪಕರಾಗಿ ಎಂಟ್ರಿ ಕೊಟ್ಟರೋ, ಮೈಸೂರು ಟಾಕೀಸ್‌ನ ಜಾಕ್ ಮಂಜು ವಿತರಣೆಯ ಹಕ್ಕು ಪಡೆದರೋ ಆಗಿನಿಂದ ಈ ಚಿತ್ರದ ಬಗ್ಗೆ ಎಲ್ಲರಲ್ಲೂ ಕುತೂಹಲ ಸೃಷ್ಟಿಯಾಗಿತ್ತು. ಲೂಸಿಯಾ, ಯೂಟರ್ನ್ ಮುಂತಾದ ಸಿನಿಮಾಗಳ ಮೂಲಕ ತನ್ನದೇ ಶೈಲಿಯ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ಪವನ್ ಈ ಚಿತ್ರವನ್ನು ಖರೀದಿಸಿದ್ದಾರೆಂದಮೇಲೆ `ಏನೋ ಇರಬೇಕು’ ಎನ್ನುವ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿತ್ತು. ಈಗ ಕಡೆಗೂ `ಮೊಟ್ಟೆ’ಯೊಳಗಿನ ಅಸಲೀಯತ್ತು ಜಾಹೀರಾಗಿದೆ.
ಒಬ್ಬ ಕನ್ನಡ ಲೆಕ್ಚರರ್. ವಯಸ್ಸಿನ್ನೂ ಇಪ್ಪತ್ತೆಂಟಾದರೂ ಬೊಕ್ಕ ತಲೆಯ ಕಾರಣಕ್ಕೆ ಹಿರಿಯನಂತೆ ಕಾಣುವ ಯುವಕ. ಮಗನ ತಲೆಯಲ್ಲಿ ಇರೋ ಕೂದಲೂ ಉದುರುವ ಮುಂಚೆ ಮದುವೆ ಮಾಡಿಬಿಡಬೇಕೆನ್ನುವ ಹೆತ್ತವರ ಸಹಜ ಆತಂಕ. ಹಾಗಂತ ಹೆಣ್ಣು ಹುಡುಕಿಕೊಂಡು ಹೋದರೆ ಎಲ್ಲ ಕಡೆ ಮತ್ತದೇ ಕೇಶದೋಷದಿಂದ ರಿಜೆಕ್ಟ್ ಸೀಲು ಜಡಿಸಿಕೊಂಡು ಬರಬೇಕಾದ ಸಂದಿಗ್ಧತೆ. ಇನ್ನು ಬ್ರೋಕರನನ್ನು ನಂಬಿ ಕೂರುವುದಕ್ಕಿಂತಾ ತನ್ನ ಸುತ್ತಲಿನ ಪರಿಸರದಲ್ಲೇ ಯಾವುದಾದರೊಂದು ಹುಡುಗಿಯನ್ನು ಲವ್ ಮಾಡಿ ಮದುವೆಯಾಗುವುದೆಂದು ತೀರ್ಮಾನಿಸುವ ಲೆಕ್ಚರನಿಗೆ ಮತ್ತೆ ಅಲ್ಲೂ ಎದುರಾಗೋದು ಭರ್ತಿ ನಿರಾಸೆ. ಬಾಹ್ಯ ಸೌಂದರ್ಯಕ್ಕೆ ಮರುಳಾಗೋ ಜನ ಈತನ ವಿದ್ಯೆ, ಹುದ್ದೆ, ಮನಸ್ಸು ಯಾವುದಕ್ಕೂ ಬೆಲೆ ಕೊಡೋದಿಲ್ಲ. ಕಡೆಗೊಬ್ಬಳು ಬಾಲ್ಯ ಸ್ನೇಹಿತೆ ಸಿಗುತ್ತಾಳೆ. ಆದರೆ ಆಕೆಯ ಮೇಲೆ ಈತನಿಗೆ ಮನಸ್ಸಾಗೋದಿಲ್ಲ. ಹಾಗಾದರೆ ಕೂದಲುಹೀನ ಯುವಕನ ಬದುಕು ಯಾವ ತಿರುವು ತೆಗೆದುಕೊಳ್ಳುತ್ತದೆ ಅನ್ನೋದಕ್ಕೆ ಒಂದು ಮೊಟ್ಟೆಯ ಕಥೆಯನ್ನೊಮ್ಮೆ ನೋಡಲೇಬೇಕು.
ಇದು ಬರೀ ಕಡಿಮೆ ಕೇಶದ ವ್ಯಕ್ತಿಯ ಚಿತ್ರಣವಾಗಿಲ್ಲ. ಮಗನಿಗೆ ಮದುವೆ ಮಾಡಬೇಕೆಂದು ಹಂಬಲಿಸುವ ಹೆತ್ತವರು, ಹೋದಲ್ಲೆಲ್ಲಾ `ಶನಿ’ಯಂತೆ ಕಾಡುವ ಸ್ಫ್ಪುರದ್ರೂಪಿ ಸಹೋದರ, ಆತನ ಲವಿಡವಿ, ಡಾ. ರಾಜ್ ಮತ್ತು ಕನ್ನಡ ಎರಡೂ ಒಂದೇ ಎನ್ನುವ ಮಟ್ಟಿಗೆ ಹೀರೋ ಜನಾರ್ಧನನ ಅಭಿಮಾನ. ಕೂದಲು ಇಲ್ಲದವರನ್ನು ಬುಟ್ಟಿಗೆ ಬೀಳಿಸಿಕೊಂಡು ವ್ಯವಹಾರ ಕುದುರಿಸುವ ಮಂದಿ, ಹೃದಯದಲ್ಲಿ ಗುಡಿ ಕಟ್ಟಿಕೊಂಡು ಮೂಕ ಹೆಂಡತಿಯನ್ನು ಪ್ರೀತಿಸುವ ಗಂಡ, ಕಾಲೇಜು ಹುಡುಗರ ತಪ್ಪನ್ನು ಬಂಡವಾಳ ಮಾಡಿಕೊಳ್ಳುವ ಕಾಲೇಜು ಮುಖ್ಯಸ್ಥ… ಹೀಗೆ ಒಂದು ಮೊಟ್ಟೆಯಲ್ಲಿ ಹಲವಾರು ಕಥೆಗಳು ತೆರೆದುಕೊಂಡಿದೆ.
ಇನ್ನು ಚಿತ್ರದಲ್ಲಿ ಪ್ರವೀಣ್ ಶ್ರೀಯನ್ ಸುಂದರವಾದ ಛಾಯಾಗ್ರಹಣ, ಸಂಕಲನ ಹಾಗೂ ಕಲರಿಂಗ್ ಅಳವಡಿಕೆ ಮಾಡಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಹದವಾಗಿದೆ. ಉಷಾ ಬಂಢಾರಿ ಒಬ್ಬರನ್ನು ಹೊರತು ಪಡಿಸಿ ಮಿಕ್ಕೆಲ್ಲರೂ ಬಹುತೇಕ ಹೊಸಬರೇ. ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ಹೀರೋ ಆಗಿ ನಟಿಸುವುದರ ಜೊತೆಗೆ ತಾವೇ ಕಥೆ ಬರೆದು, ನಿರ್ದೇಶನವನ್ನೂ ಮಾಡಿದ್ದಾರೆ.
ಇಂಥದ್ದೊಂದು ಸುಂದರವಾದ ಸಿನಿಮಾವನ್ನು ನೋಡದೇ, ಮತ್ಯಾವತ್ತೋ ನಿರಾಸೆಗೊಳ್ಳಬೇಡಿ. ನಕ್ಕು ನಗಿಸುತ್ತಲೇ ಕಾಡುವ ಈ ಸಿನಿಮಾವನ್ನು ಮನೆಮಂದಿಯ ಸಮೇತ ಹೋಗಿ ಧಾರಾಳವಾಗಿ ನೋಡಿಬರಬಹುದು….

Leave a Reply

Your email address will not be published. Required fields are marked *