One N Only Exclusive Cine Portal

ಉಪ್ಪಿ ಪೊಲಿಟಿಕಲ್ ಗೇಮ್ ಶುರು!

ಕಡೆಗೂ ರಿಯಲ್ ಸ್ಟಾರ್ ಉಪೇಂದ್ರ ಅಧಿಕೃತ ರಾಜಕೀಯ ಪ್ರವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಬೆಳಗ್ಗೆ ಹನ್ನೊಂದು ಘಂಟೆಗೆ ಮಾಧ್ಯಮಗಳ ಮುಂದೆ ಹಾಜರಾಗಲಿರೋ ಉಪೇಂದ್ರ ತಮ್ಮ ರಾಜಕೀಯ ನಡೆಯ ಕುರಿತಾಗಿ ನಿಖರವಾದ ಮಾಹಿತಿ ನೀಡಲಿದ್ದಾರೆ.

ಅಷ್ಟಕ್ಕೂ ಉಪೇಂದ್ರ ರಾಜಕೀಯ ಪ್ರವೇಶದ ಬಗ್ಗೆ ಗುಲ್ಲುಗಳೇಳೋದು ಇದೇ ಮೊದಲೇನಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆ ನಡೆದಾಗಲೇ ಉಪೇಂದ್ರ ರಾಜಕೀಯ ಪ್ರವೇಶ ಮಾಡಿ ಒಂದು ಕ್ಷೇತ್ರದಿಂದ ಸ್ಪರ್ಧಿಸಿಯೇ ಬಿಡುತ್ತಾರೆಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೀಗ ಅಂಥಾ ಗೊಂದಲಗಳೆಲ್ಲ ಪರಿಹಾರವಾಗೋ ಕಾಲ ಸನ್ನಿಹಿತವಾಗಿದೆ.
ಆದರೆ ಎಂಥಾ ತಿಳಿಯಾದ ವಾತಾವರಣದಲ್ಲಿಯೂ ಒಂದು ಗೊಂದಲವನ್ನು ಜಾರಿಯಲ್ಲಿಡೋದು ಉಪೇಂದ್ರರ ಟ್ಯಾಲೆಂಟು. ಇದೀಗ ಅವರ ರಾಜಕೀಯ ಪ್ರವೇಶದ ವಿಚಾರದಲ್ಲಿಯೂ ಅದೇ ಆಗಿದೆ. ಆದರೆ ಗೊಂದಲವಿರೋದು ಅವರು ರಾಜಕೀಯಕ್ಕೆ ಸೇರುತ್ತಾರಾ ಇಲ್ಲವಾ ಎಂಬುದಲ್ಲ. ಅವರು ಬೇರೆ ಪಕ್ಷ ಸೇರುತ್ತಾರಾ ಅಥವಾ ಸ್ವಂತ ಪಕ್ಷ ಕಟ್ಟುತ್ತಾರಾ ಎಂಬುದಷ್ಟೆ.
ಉಪೇಂದ್ರ ಅವರ ಆಪ್ತ ಮೂಲಗಳು ಹೊಸಾ ಪಕ್ಷ ಕಟ್ಟೋದರ ಬಗ್ಗೆ ಪೂರಕ ಸುದ್ದಿಗಳನ್ನು ಹರಿ ಬಿಡುತ್ತಿವೆ. ಆದರೆ ಅಸಲೀ ಲೆಕ್ಕವೇ ಬೇರೆಯದ್ದಿದೆ. ನಾಳೆ ಬೆಳಗ್ಗೆ ಪ್ರೆಸ್ ಮೀಟು ಮಾಡೋ ಉಪೇಂದ್ರ ಸಂಜೆ ಹೊತ್ತಿಗೆ ಬಿಜೆಪಿಯ ಅಮಿತ್ ಶಾ ಮುಂತಾದವರನ್ನು ಭೇಟಿಯಾಗಲಿದ್ದಾರಂತೆ. ಅಲ್ಲಿನ ಮುಖಂಡರ ಚಿಂತನಾ ಸಭೆಯಲ್ಲಿಯೂ ಭಾಗಿಯಾಗಲಿದ್ದಾರಂತೆ. ಅಲ್ಲಿಗೆ ಉಪೇಂದ್ರ ಬಿಜೆಪಿ ಸೇರೋದು ಗ್ಯಾರೆಂಟಿ ಎಂಬಂತಿದೆ.
ಆದರೆ ಉಪೇಂದ್ರ ಬಿಜೆಪಿ ಸೇರುತ್ತಾರೆಂಬುದು ಯಾರಿಗೂ ಅಚ್ಚರಿಯ ವಿಚಾರವಲ್ಲ. ಯಾಕೆಂದರೆ ಅವರು ಆರಂಭ ಕಾಲದಿಂದಲೂ ಬಿಜೆಪಿ ಪರವಾದ ಒಲವು ಹೊಂದಿದ್ದವರು. ಮೋದಿಯವರ ನಡೆಯನ್ನು ಆಗಾಗ ಮೆಚ್ಚಿಕೊಂಡಿದ್ದವರು. ಇತ್ತೀಚೆಗೆ ನಾಡ ಧ್ವಜದ ವಿಚಾರ ಬಂದಾಗಲೂ ಪರೋಕ್ಷವಾಗಿ ಬಿಜೆಪಿ ಪರವಾಗಿಯೇ ಬ್ಯಾಟಿಂಗು ನಡೆಸಿದ್ದವರು. ಹಾಗಿರೋವಾಗ ಉಪ್ಪಿಯ ರಾಜಕೀಯ ನಡೆ ಬಿಜೆಪಿ ಕಡೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಅಷ್ಟಕ್ಕೂ ಸ್ವಂತ ಪಕ್ಷ ಕಟ್ಟಿ ಜಯಿಸಿಕೊಳ್ಳುವಷ್ಟು ವರ್ಚಸ್ಸು ಸದ್ಯ ಉಪ್ಪಿಗಿಲ್ಲ. ಆರಂಭದಲ್ಲಿ ಅವರೆಡೆಗಿದ್ದ ಕ್ರೇಜ್ ಕೂಡಾ ಈಗ ಕಡಿಮೆಯಾಗಿದೆ. ಪಕ್ಕಾ ಬುದ್ಧಿವಂತ ಉಪ್ಪಿ ಸ್ವಂತ ಪಕ್ಷ ಕಟ್ಟಿ ಬರ್ಬಾದೇಳೋ ದಡ್ಡತನಕ್ಕಂತೂ ಖಂಡಿತಾ ಕೈ ಹಾಕೋದಿಲ್ಲ. ಒಂದು ಮೂಲದ ಪ್ರಕಾರ ಆರಂಭದಿಂದಲೂ ಬಿಜೆಪಿ ಸೇರಬೇಕೆಂದುಕೊಂಡಿದ್ದ ಉಪ್ಪಿ ಆ ಪಕ್ಷದವರೇ ಕರೆದರೆ ವ್ಯಾಲ್ಯೂ ಜಾಸ್ತಿ ಎಂಬ ಕಾರಣದಿಂದ ಕಾಲ ತಳ್ಳಿದ್ದರು. ಈಗ ಅದಕ್ಕೆ ಮುಹೂರ್ತ ಕೂಡಿ ಬಂದಂತಿದೆ.

Leave a Reply

Your email address will not be published. Required fields are marked *